ಆಧುನಿಕ ಕನ್ನಡ ಸಾಹಿತ್ಯದಲ್ಲಿ ನಡೆದ ವಾಗ್ವಾದಗಳ ವಿಶ್ಲೇಷಣೆ- ಚರ್ಚೆ ಈ ಗ್ರಂಥದಲ್ಲಿದೆ. ವಾಗ್ವಾದಗಳ ಮೂಲಕ ಕನ್ನಡ ಸಾಹಿತ್ಯ ಚರಿತ್ರೆ ಕಟ್ಟುವ ವಿಭಿನ್ನ ಪ್ರಯತ್ನವನ್ನು ರಹಮತ್ ತರೀಕೆರೆ ಅವರು ಈ ಸಂಕಲನದಲ್ಲಿ ಮಾಡಿದ್ದಾರೆ. ಎಲ್ಲರಿಗೂ ‘ಕದನ ಕುತೂಹಲ’ ಇರುವುದು ಸಹಜ. ಅಂತಹ ತಾತ್ವಿಕ- ಸಾಹಿತ್ಯಕ ಕದನಗಳ ಬಗ್ಗೆ ನೋಡಿದ ಹಿನ್ನೋಟ ಈ ಗ್ರಂಥದಲ್ಲಿದೆ. ಸಾಂಸ್ಕೃತಿಕ- ಸಾಮಾಜಿಕ ಆಯಾಮಗಳನ್ನೂ ಒಳಗೊಂಡಿರುವ ಚರ್ಚೆಗಳ ವಿಶ್ಲೇಷಣೆ ಈ ಪುಸ್ತಕದಲ್ಲಿದೆ. ಗ್ರಂಥದಲ್ಲಿ ಹನ್ನೆರಡು ಅಧ್ಯಾಯಗಳಿವೆ. ಒಟ್ಟು ಹತ್ತು ವಾಗ್ವಾದ ಬಗ್ಗೆ ವಿಶ್ಲೇಷಣೆ ಇದೆ. 1917ರಲ್ಲಿ ಕಾದಂಬರಿಗಳ ಬಗ್ಗೆ ನಡೆದ ‘ನಾವಲು’ ವಾಗ್ವಾದದ ಜೊತೆ ಚರ್ಚೆ ಆರಂಭವಾಗುತ್ತದೆ. 2005ರಲ್ಲಿ ಸಂಶೋಧಕ ಎಂ.ಎಂ. ಕಲಬುರ್ಗಿ ಅವರು ಬರೆದ ‘ಖರೆ ಖರೇ ಸಂಗ್ಯಾ ಬಾಳ್ಯಾ’ ಕುರಿತು ಪ್ರಜಾವಾಣಿ ದಿನಪತ್ರಿಕೆಯಲ್ಲಿ ನಡೆದ ವಾಗ್ವಾದದ ವರೆಗೂ ಚರ್ಚೆ ಹರಡಿಕೊಂಡಿದೆ. 1941ರ ರುದ್ರನಾಟಕ ವಾಗ್ವಾದ, 1944ರಲ್ಲಿ ಕುವೆಂಪು ಮತ್ತು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ನಡುವಿನ ‘ಶೂದ್ರ ತಪಸ್ವಿ’ ವಾಗ್ವಾದ, 1952ರಲ್ಲಿ ಅನಕೃ ಬರವಣಿಗೆ ಕೇಂದ್ರವಾಗಿದ್ದ ‘ಅಶ್ಲೀಲ ಸಾಹಿತ್ಯ’ ವಾಗ್ವಾದ, 1956ರ ಚೆನ್ನಬಸವನಾಯಕ ವಾಗ್ವಾದ, 1973ರ ‘ಬೂಸಾ ಸಾಹಿತ್ಯ ವಾಗ್ವಾದ, 1978ರ ಕರ್ನಾಟಕ ಸಂಸ್ಕೃತಿ ವಾಗ್ವಾದ, 1990ರ ‘ಶ್ರೇಷ್ಠತೆ’ಯ ವಾಗ್ವಾದಗಳನ್ನು ಲೇಖಕರು ಚರ್ಚಿಸಿದ್ದಾರೆ. ಆರಂಭದಲ್ಲಿ ಪ್ರಸ್ತಾವನೆ ಮತ್ತು ಕೊನೆಯಲ್ಲಿ ‘ಮುಗಿತಾಯ’ಗಳು
(ಕನ್ನಡ ಸಾಹಿತ್ಯ ವಾಗ್ವದಗಳು, ಆಗಸ್ಟ್ 2012, ಪುಸ್ತಕದ ಪರಿಚಯ, ಹೊಸತು)
ಬರೆದುದೆಲ್ಲ ಮೌಲಿಕವಾಗಿ, ಓದುಗ ತಲೆದೂಗುವಂತಹ ವಸ್ತುನಿಷ್ಠ ಬರವಣಿಗೆ ರಹಮತ್ ಅವರದು. ಕನ್ನಡದ ಶ್ರೇಷ್ಠ ಬರಹಗಾರರೆಂದು ಪ್ರಸಿದ್ಧರಾದವರ ಸಾಹಿತ್ಯಕೃತಿಗಳ ಬಗೆಗಿನ ವಿಮರ್ಶೆಗಳನ್ನು ಅವಲೋಕಿಸಿ ಈ ಕೃತಿ ರಚಿಸಲಾಗಿದೆ. ಕೃತಿಯೊಂದು ಪ್ರಕಟವಾದಾಗ ಪರ-ವಿರೋಧ ಅನಿಸಿಕೆಗಳು ವಿಮರ್ಶೆಯ ರೂಪದಲ್ಲಿ ಬಂದೇ ಬರುತ್ತವೆ. ಜಾತಿ-ಧರ್ಮ- ಮತಗಳ ಬಗ್ಗೆ ವಸ್ತುವಿದ್ದಾಗ ಅಥವಾ ಈಗಾಗಲೇ ಅಂಗೀಕೃತವೆಂದು ಪರಿಗಣಿಸಲಾದ ಮೌಲ್ಯ-ಸಿದ್ಧಾಂತಗಳ ವಿರುದ್ಧ ದನಿಯೆತ್ತಿದಾಗ ಪರಸ್ಪರ ವಾಗ್ವಾದ-ವಿವಾದ ತಾರಕಕ್ಕೆ ಏರುವುದೂ ಇದೆ. 'ಸೀತಾಯಣ'ದಂಥ ಕೃತಿಗಳು ಬಂದಾಗ ಹಲ್ಲೆಗಳೂ ನಡೆದಿವೆ. 'ಅನಾವರಣ', 'ಆನು ದೇವಾ ಹೊರಗಣವನು' ಕೃತಿಗಳು ಪ್ರಕಟವಾದಾಗಲೂ ವಿವಾದ - ಚರ್ಚೆ - ಖಂಡನೆ - ಪರ - ವಿರೋಧ ಮುಂತಾದವೂ ನಡೆದಿದ್ದವು. ಇವು ಸಾಹಿತ್ಯ ಸಂಘರ್ಷದ ರೂಪತಾಳೆ ಎಷ್ಟೋ ಮನಸ್ಸುಗಳು ಘಾಸಿಗೊಂಡು ಒಬ್ಬೊಬ್ಬರ ಚಿಂತನೆ ಒಂದೊಂದು ದಿಕ್ಕಿಗೆ ಹರಿದು ಓದುಗ ಕಂಗಾಲಾಗಿದ್ದೂ ಇದೆ. ಕುವೆಂಪು, ಮಾಸ್ತಿ, ಬೇಂದ್ರೆ, ತೇಜಸ್ವಿ, ಕಟ್ಟಿಮನಿಯವರಂತಹ ಪ್ರಗತಿಪರ - ನವ್ಯಸಾಹಿತಿಗಳ ಬರಹಗಳು ಸಾಕಷ್ಟು ವಿಮರ್ಶೆಗೆ ಒಳಪಟ್ಟಿವೆ. ಅವುಗಳ ಸ್ವರೂಪ ಹೇಗಿತ್ತು ಮತ್ತು ಸಾಹಿತ್ಯ ಸಂಘರ್ಷಕ್ಕೆ ಯಾವ ನೆಲೆಯಲ್ಲಿ ವೇದಿಕೆ ಸಿದ್ಧವಾಗಿತ್ತು ಎಂಬುದನ್ನೂ, ಮತ್ತೆ ಕೆಲವು ಚರ್ಚೆಗಳು ಆರೋಗ್ಯಕರ ವಾಗಿದ್ದು ಹೇಗೆ ಸೌಹಾರ್ದತೆ ಮೂಡಿತ್ತೆಂಬುದನ್ನೂ ಇಲ್ಲಿನ ಲೇಖನಗಳು ತಿಳಿಸುತ್ತವೆ. ವಾಗ್ವಾದಗಳೆಲ್ಲ ವಿವಾದಗಳಲ್ಲ ಎಂಬುದೂ ಇಲ್ಲಿ ಮುಖ್ಯವಾಗುತ್ತದೆ. ಇದೊಂದು ಮಥನವಷ್ಟೇ ಅಲ್ಲದೆ ಬರಹಗಾರರಿಗೊಂದು ಎಚ್ಚರಿಕೆಯೂ ಹೌದು.
©2024 Book Brahma Private Limited.