ಪೊಲೀಸ್ ಅಧಿಕಾರಿಗಳು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಸಾಹಿತಿಗಳು, ಚಿಂತಕರು ಗುಜರಾತ್ ಹತ್ಯಾಕಾಂಡದ ಕುರಿತಂತೆ ಬರೆದುದಕ್ಕೆ ಲೆಕ್ಕವಿಲ್ಲ. ಅದರ ಬಗ್ಗೆ ಬರೆದು ಮುಗಿದಿದೆ ಎನ್ನುವಂತೆಯೂ ಇಲ್ಲ. ಇದೀಗ ಇನ್ನೊಂದು ಗುಜರಾತ್ ಫೈಲ್ ಖ್ಯಾತ ಪತ್ರಕರ್ತ, ಅಂಕಣಗಾರ್ತಿ ರಾಣಾ ಅಯೂಬ್ ಮೂಲಕ ತೆರೆದಿದೆ. ಲಂಕೇಶ್ ಪ್ರಕಾಶನ ಈ ಕೃತಿಯನ್ನು ಹೊರಗೆ ತಂದಿದೆ. ಹಿರಿಯ ಬರಹಗಾರರಾಗಿರುವ ಶ್ರೀನಿವಾಸ್ ಕಾರ್ಕಳ ಅವರು ಇದನ್ನು ಕನ್ನಡಕ್ಕಿಳಿಸಿದ್ದಾರೆ. “ಗುಜರಾತ್ ಫೈಲುಗಳು-ಮುಚ್ಚಿ ಹಾಕುವ ಹುನ್ನಾರದ ಒಳನೋಟಗಳು'” ಹೆಸರೇ ತಿಳಿಸುವಂತೆ ಗುಜರಾತ್ ಗಲಭೆಗಳು, ನಕಲಿ ಎನ್‌ಕೌಂಟರ್‌ಗಳು ಮತ್ತು ಬೆಚ್ಚಿ ಬೀಳಿಸುವಂತಹ ಸತ್ಯ ಗಳನ್ನು ಮುನ್ನೆಲೆಗೆ ತಂದ, ಗೃಹಮಂತ್ರಿ ಹರೇನ್ ಪಾಂಡ್ಯನ ಹತ್ಯೆ ಇತ್ಯಾದಿಗಳ ಬಗ್ಗೆ ಪತ್ರಕರ್ತೆ ರಾಣಾ ಅಯೂಬ್ ಎಂಟು ತಿಂಗಳ ಕಾಲ ಮಾರುವೇಷದಲ್ಲಿ ನಡೆಸಿದ ಕಾರ್ಯಾಚರಣೆಯ ಕಥಾನಕ. ಖಾದಿ ಮತ್ತು ಖಾಕಿ ಜೊತೆ ಸೇರಿದರೆ ಮಾನವತೆಯ ಮೇಲೆ ಅದೆಷ್ಟು ಬರ್ಬರವಾದ ಹಲ್ಲೆಗಳು ನಡೆಯ ಬಹುದು ಎನ್ನುವುದನ್ನು ರಾಣಾ ಅಯೂಬ್ ಅವರು ತಮ್ಮ ಕಾರ್ಯಾಚರಣೆಯಲ್ಲಿ ಬಹಿರಂಗಪಡಿಸಿದ್ದಾರೆ. ಅವರು ವಿವಿಧ ಅಧಿಕಾರಿಗಳನ್ನು ರಾಜಕಾರಣಿಗಳನ್ನು ಸಂದರ್ಶನ ಮಾಡಿದಾಗ ರಹಸ್ಯವಾಗಿ ದಾಖಲಿಸಲಾದ ವೀಡಿಯೊಗಳೇ ಈ ಗುಜರಾತ್ ಫೈಲುಗಳ ಪುಟಗಳು.
©2024 Book Brahma Private Limited.