ಲೇಖಕ ಮಾಧವ ಐತಾಳ್ ಅವರು ಕನ್ನಡಕ್ಕೆ ಅನುವಾದ ಮಾಡಿದ ಕೃತಿ ʻದೇಹ ಭಾಷೆʼ. ವಿನಯ್ ಮೋಹನ್ ಶರ್ಮಾ ಅವರು ಮೂಲ ಲೇಖಕರಾಗಿದ್ದಾರೆ. ಪುಸ್ತಕದ ಮುನ್ನುಡಿಯಲ್ಲಿ, “ನಾವು ಮಾತನ್ನಾಡಿದಾಗ ದೇಹ ಮತ್ತು ಅಂಗಿಕ ಚಲನೆ ನಮ್ಮ ಸಂದೇಶವನ್ನು ಪರಿಣಾಮಕಾರಿಯಾಗಿ ಹಾಗೂ ಸುಲಭವಾಗಿ ವ್ಯಕ್ತಿಗೆ ತಲುಪಿಸುತ್ತದೆ. ಕೆಲವೊಮ್ಮೆ ನಾವು ಒಂದೂ ಮಾತನ್ನಾಡದಿದ್ದರೂ, ಹೇಳಬೇಕಾದ್ದನ್ನು ದೇಹಭಾಷೆ ಮೂಲಕ ಹೇಳಬಹುದು. ದೇಹ, ಮುಖ್ಯವಾಗಿ ಮುಖದ ಭಾವನೆಗಳು ತಮ್ಮದೇ ಭಾಷೆ ಮೂಲಕ ಹೇಳಬೇಕಾದ್ದನ್ನು ರವಾನಿಸುತ್ತವೆ. ಕೆಲವೊಮ್ಮೆ ನಾವು ಹೇಳಬೇಕಾದ್ದನ್ನು ಬಾಯಿ ಮೂಲಕ ಹೇಳುವುದಿಲ್ಲ. ಬಹುತೇಕ ಮಾತಿನ ಸಂದರ್ಭದಲ್ಲಿ ನಾವು ನಟಿಸುತ್ತೇವೆ. ಸಂದರ್ಭಾನುಸಾರ ನಮ್ಮ ಮುಖಭಾವ ಹಾಗೂ ದೇಹಭಾಷೆ ಬದಲಾಗುತ್ತದೆ. ಮನುಷ್ಯ ಸಂಘಜೀವಿ ಹಾಗೂ ನಿತ್ಯದ ಬದುಕಿನಲ್ಲಿ ನಾವೆಲ್ಲ ಇನ್ನೊಬ್ಬರೊಡನೆ ಬೆರೆಯಬೇಕಾಗುತ್ತದೆ. ವೈದ್ಯರು, ವಕೀಲರು, ಶಿಕ್ಷಕರು, ಪೋಷಕರು, ಸಹೋದ್ಯೋಗಿಗಳು ಸೇರಿದಂತೆ ಅನ್ಯರ ಜತೆ ಸಂಪರ್ಕ-ಸಂಬಂಧ ಸಾಧ್ಯವಾಗಬೇಕಾದರೆ, ನಾವು ಅವರೆಲ್ಲ ಮಾತನಾಡುವ ಶೈಲಿ, ದೇಹಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿದಿನ ತಮ್ಮ ಗ್ರಾಹಕರೊಂದಿಗೆ ಸಂಪರ್ಕ ಹೊಂದಿರಬೇಕಾದ ವೃತ್ತಿಯಲ್ಲಿರುವವರಿಗೆ ಇಂಥ ಜ್ಞಾನ ಉಪಯುಕ್ತವಾಗಿರಲಿದೆ. ಕೆಲವೊಮ್ಮೆ ಹಸ್ತಲಾಘವವೊಂದರಿಂದಲೇ ಇನ್ನೊಬ್ಬ ವ್ಯಕ್ತಿಯ ಉದ್ದೇಶ-ಸ್ವಭಾವವನ್ನು ಅರಿಯುವುದು ಸಾಧ್ಯವಿದೆ. ಈ ಪುಸ್ತಕ ಕ್ಷೇತ್ರದ ಹಲವು ತಜ್ಞರ ಬರವಣಿಗೆಯನ್ನು ಪ್ರಾಯೋಗಿಕವಾಗಿ ಬಳಸಿ, ಕಂಡಕೊಂಡ ಅನುಭವದ ಫಲವಾಗಿದೆ” ಎಂದು ಹೇಳಲಾಗಿದೆ.
©2025 Book Brahma Private Limited.