ಹನ್ನೆರಡನೆಯ ಶತಮಾನದಲ್ಲಿ ರಚನೆಯಾದ ವಚನಗಳನ್ನು ಒಂದು ನಿರ್ದಿಷ್ಟವಾದ ಪರಿಕಲ್ಪನೆಯನ್ನು ಸಂಕಲಿಸಿ-ಸಂಪಾದಿಸಿದ ಕೃತಿ ’ಶೂನ್ಯ ಸಂಪಾದನೆ’. ಹದಿನೈದನೆಯ ಶತಮಾನದಲ್ಲಿ ’ಶೂನ್ಯ ಸಂಪಾದನೆ’ ಕೃತಿ ಸಂಕಲಿತಗೊಂಡಿತು. ನಾಲ್ವರು ಶೂನ್ಯ ಸಂಪಾದನೆಯ ನಾಲ್ಕು ಶೂನ್ಯ ಸಂಪಾದನೆಗಳು ಲಭ್ಯವಿವೆ. ಕಥನ-ಸಂವಾದ ರೂಪದಲ್ಲಿ ಸಂಕಲಿಸಲಾಗಿದೆ. ಶೂನ್ಯ ಸಂಪಾದನೆಯ ಪರಾಮರ್ಶೆಯನ್ನು ಹಿರಿಯ ವಿದ್ವಾಂಸ ಸಂ.ಶಿ. ಭೂಸನೂರಮಠ ಅವರು ಈ ಕೃತಿಯಲ್ಲಿ ಮಾಡಿದ್ದಾರೆ. ಅವರ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಪ್ರಾಪ್ತವಾಗಿದೆ.
’ಶೂನ್ಯ ಸಂಪಾದನೆಯ ಪರಾಮರ್ಶೆ' ತುಂಬ ಅಪರೂಪದ ಒಂದು ಕೃತಿ. ಇಂಥದೊಂದು ಗ್ರಂಥ ಕನ್ನಡದಲ್ಲಾಗಲೀ ಬೇರೆ ಭಾಷೆಗಳಲ್ಲಾಗಲೀ ಪ್ರಕಟವಾಗಿದೆಯೋ ಹೇಗೋ ತಿಳಿಯದು. 'ಶೂನ್ಯ ಸಂಪಾದನೆ'ಯೇ ನಿಜವಾಗಿಯೂ ತೀರ ಅಪರೂಪದ ಒಂದು ಸೃಷ್ಟಿ. ನಿಶ್ಯಬ್ದವನ್ನು ಒಳಗೊಂಡಿರುವ ಶಬ್ದಗಳು, ತನಗಿಂತ ದೊಡ್ಡದನ್ನು ಅರಸುತ್ತಿರುವ ಮಾನವ ಚೇತನದ ಅಂತರಂಗದಲ್ಲಿ ಏರಿಸುವ ಅಲೆಗಳನ್ನು, ಹೊತ್ತಿಸುವ ಕಿಡಿಗಳನ್ನು, ಬೆಳಗುವ ಬೆಳಕನ್ನು ಸ್ಫುಟಗೊಳಿಸಿ ತೋರಿಸುವ ಆಶ್ಚರ್ಯ ಶೂನ್ಯ ಸಂಪಾದನೆಯ ಉದ್ದಕ್ಕೂ ಸ್ಥಾಯಿಯಾಗಿದೆಯಷ್ಟೆ. ಶ್ರೀ ಭೂಸನೂರುಮಠ ಅವರು ಆ ಆಶ್ವರ್ಯವನ್ನೇ ಚಿಂತನೆಯ ವಸ್ತುವನ್ನಾಗಿ ಮಾಡಿಕೊಂಡು ಮೂಲ ಆಶ್ಚರ್ಯದ ಸ್ಥಾಯಿಯೂ ಹೊಮ್ಮಿಸುವ ಸಂಚಾರಿಯ ತರಂಗಗಳನ್ನು ತಮ್ಮ ಈ ಪರಾಮರ್ಶೆಯಲ್ಲಿ ಉರುಳಿಸುತ್ತಾ ಹೋಗಿದ್ದಾರೆ. 'ಶೂನ್ಯ ಸಂಪಾದನೆ’ ಧಿಡೀರನೆ ಸೃಷ್ಟಿಯಾದ ಒಂದು ಸ್ವಯಂಭು ಕೃತಿ ಅಲ್ಲ. ಕನಿಷ್ಠ ಪಕ್ಷ ಐದು ಸಾವಿರ ವರ್ಷ ಈ ದೇಶದ ಮನೀಷಿಗಳು, ದ್ರಷ್ಟಾರರು ಚಿಂತಿಸಿದ, ಕಂಡ ಸತ್ಯದ ಹೊಳಹುಗಳು 'ವಚನ'ರೂಪದಲ್ಲಿ ಹರಳುಗಟ್ಟಿವೆ, ಅಲ್ಲಿ. ಆ ಅನುಭವ ಅನುಭಾವ, ಚಿಂತನೆಗಳ ಹಿನ್ನೆಲೆಯನ್ನು ಭೂಸನೂರುಮಠ ಅವರು ಬರಿಯ ವಿದ್ವತ್ತು ಎಂದು ತೋರದಂತೆ, ಆದರೆ ವಿದ್ವತ್ತಿನ ದಡಗಳು ನಮ್ಮ ಗಮನಕ್ಕೆ ಬರುವಂತೆ, ಅನುಭಾವದ ಸೊಗಡು ಉಳಿಯುವಂತೆ, ಸೊಗಸಾಗಿ ನಿರೂಪಿಸಿದ್ದಾರೆ. ಭರತ ಖಂಡದ ಹೊರಗೂ ಜ್ಞಾನಿಗಳು ಇಂಥದೇ ಮಾತನ್ನು ಹೇಳಿದ್ದಾರೆ ಎಂದು ಹೋಲಿಸಿ ತೋರಿಸಿದ್ದಾರೆ. ವಚನಕಾರರ ಮಾತಿನ ಅರ್ಥವನ್ನು ತಮ್ಮ ಮಾತಿನ ಪ್ರಖರತೆಯಿಂದ ಬೆಳಗಿ ತೋರಿಸಿದ್ದಾರೆ. ಅನುಭಾವಿಗಳು ಪರಸ್ಪರರ ಅನುಭಾವವನ್ನು ತಾಳೆ ನೋಡಿದ ರೀತಿಯನ್ನು ಸಂಭಾಷಣೆಯಲ್ಲಿ ಅದು ವ್ಯಕ್ತಗೊಂಡ ವೈಖರಿಯನ್ನು ಸರಿಯಾದ ಹಿನ್ನೆಲೆ ರಚಿಸಿ ನಮ್ಮ ಮನಸ್ಸಿಗೆ ಗ್ರಹಿಕೆಯಾಗುವಂತೆ ಮಾಡಿದ್ದಾರೆ. ವಚನಶಾಸ್ತ್ರದ ಸಮುದ್ರದಲ್ಲಿ ಮುಳುಗಿ ಅಲ್ಲಿನ ಮುತ್ತುಗಳನ್ನು ಆರಿಸಿ ತೋರಿಸುವ ಕಲೆಯಲ್ಲಿ ಪಳಗುವಾಗ ಅದೇ ಮಾತಿನ ಧಾಟಿ ಇವರಿಗೆ ಒದಗಿ ಬಂದು ಇನ್ನೂ ಕಂಪುಗೊಳಿಸಲು ಸಾಧ್ಯವಾಗಲಾರದು ಎಂಬ ಕುಸುಮವನ್ನು ಸುಗಂಧತರವನ್ನಾಗಿ ಮಾಡಿದ್ದಾರೆ. ಮಹಾದೇವಿಯಕ್ಕೆ ನಡೆದು ಬರುತ್ತಿರುವ ರೀತಿಯನ್ನು ಭೂಸನೂರುಮಠ ಅವರು ವರ್ಣಿಸುವ ರೀತಿ: 'ಸತ್ಯದ ಮನೆ ನಡೆಗಲಿತಿದೆ. ಶಾಂತಿಯ ಸಮುದ್ರ ಶಿವಸುಖಾಳಾಪದ ನುಡಿಗಲಿತಿದೆ. ಭಕ್ತಿಯ ಭಾಗ್ಯ ಯೌವನವಾಗಿದೆ. ಮುಕ್ತಿಯ ತವರು ಚೆನ್ನನ ಮನೆಗೆ ಸನ್ನೆ ಮಾಡುತ್ತಿದೆ.”
’ಪರಾಮರ್ಶೆ' ಇಂಥದ ವರ್ಗಕ್ಕೆ ಸೇರಿದ ಗ್ರಂಥ ಎಂಬ ಕಟ್ಟುಪಾಡಿಗೆ ಒಳಪಡದು. ಅದೇ ಅದರ ಅನನ್ಯತೆಗೆ ಕಾರಣವೂ ಹೌದು. ಸುಮಾರು ಸಾವಿರ ಪುಟಗಳಲ್ಲಿ ಒಂದೊಂದನ್ನೂ ಮತ್ತೆ ಮತ್ತೆ ಓದಿ, ಚಿಂತಿಸಿ, ಒಳಗನ್ನು ತುಂಬಿಕೊಳ್ಳುತ್ತಲೇ ಇರಬೇಕು ಎಂಬ ಆಕರ್ಷಣೆಯನ್ನು ಸದಾ ಒಡ್ಡುತ್ತಲೇ ಇರುವ ಕೃತಿ ಇದು.
-ಪ್ರಭುಶಂಕರ
ಶೂನ್ಯ ಸಂಪಾದನೆಯ ಪರಾಮರ್ಶೆ (ವಿವರಣ-ವ್ಯಾಖ್ಯಾನ)
ಮೊದಲನೆಯ ಆವೃತ್ತಿ 1969 ರಾವೂರು ಸಿದ್ದಲಿಂಗೇಶ್ವರಮಠ ಮತ್ತು ಅದವಾನಿಕಲ್ಲುಮಠದ ಅಧಿಪತಿಗಳು
ಡೆಮ್ಮಿ ಅಷ್ಟ 1013 ಪುಟಗಳು ಬೆಲೆ ರೂ. 15-00 25-00
ಕೃಪೆ: ಗ್ರಂಥಲೋಕ, ಜೂನ್ 1981
©2024 Book Brahma Private Limited.