‘ನಾಟ್ಯಶಾಸ್ತ್ರ ಪರಂಪರೆ ಮತ್ತು ಪ್ರಾಸಂಗಿಕತೆ’ ಪ್ರೊ. ರಾಧಾವಲ್ಲಭ ತ್ರಿಪಾಠಿ ಅವರ ಹಿಂದಿ ಕೃತಿಯನ್ನು ಹಿರಿಯ ಲೇಖಕ ಅತ್ತಿಮುರುಡು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು ನಾಟ್ಯಶಾಸ್ತ್ರದ ಕುರಿತಾಗಿ ವಿಶ್ಲೇಷಣಾ ನೋಟವನ್ನು ನೀಡುವುದಲ್ಲದೆ; ಯಕ್ಷಗಾನ ಸೇರಿದಂತೆ ವರ್ತಮಾನದಲ್ಲೂ ಶಾಸ್ತ್ರೀಯತೆಯನ್ನುಳಿಸಿಕೊಂಡು ಬೆಳೆದುಬಂದಿರುವ ಭಾರತದ ಎಲ್ಲ ಪ್ರದರ್ಶನ ಕಲೆಗಳಲ್ಲಿ ಕಳಚಿರುವ ಪಾರಂಪರಿಕ ಕೊಂಡಿಗಳನ್ನು ಜೋಡಿಸಿಕೊಳ್ಳಲು ಅಥವಾ ಅರ್ಥೈಸಿಕೊಳ್ಳಲು ಅತ್ಯಂತ ಯೋಗ್ಯವಾಗಿದೆ. ನಾಟ್ಯಶಾಸ್ತ್ರ ಪರಂಪರೆಯನ್ನು ಉಲ್ಲೇಖಿಸುತ್ತಾ `ನಾಟ್ಯಶಾಸ್ತ್ರ ಮತ್ತು ಸಂಸ್ಕೃತ ನಾಟಕವಿರದ ಭರತವರ್ಷವು ಉಂಗುರ ಕಳೆದುಹೋಗಿರುವ ಶಕುಂತಲೆಯಂತೆ. ನಾಟ್ಯಶಾಸ್ತ್ರ ಮತ್ತು ಸಂಸ್ಕೃತ ನಾಟಕಗಳೊಂದಿಗಿನ ಭಾರತವು ಕಳೆದುಹೋದ ಉಂಗುರವು ದುಷ್ಯಂತನಿಗೆ ದೊರಕಿದಂತಿರುತ್ತದೆ’ ಎಂದು ಡಾ. ತ್ರಿಪಾಠಿಯವರು ಉದ್ಗರಿಸಿದ್ದನ್ನು ಅತ್ತಿಮುರುಡು ಅವರು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ.
ಇದು ಉಪನ್ಯಾಸ ಮಾಲಿಕೆಯಾದುದರಿಂದ ಪ್ರಧಾನ ಶೀರ್ಷಿಕೆಯೆಂದು ಪ್ರತ್ಯೇಕವಾಗಿಲ್ಲ. ಎಲ್ಲವೂ ಉಪಶೀರ್ಷಿಕೆಗಳೇ ಆಗಿವೆ. ನಾಟ್ಯಶಾಸ್ತ್ರದ ಪ್ರಯೋಜನ ಸಂಬಂಧ ನಿರೂಪಣೆ, ನಾಟ್ಯಶಾಸ್ತ್ರದ ವಸ್ತು, ಸಂರಚನಾತ್ಮಕ ಅನ್ವಿತಿ (ಸಂಬಂಧ), ವೈಶ್ವಿಕ (ಜಾಗತಿಕ), ಏಕಾತ್ಮತಾ ಮೂಲ ಅನ್ವಿತಿ, ನಾಟ್ಯಶಾಸ್ತ್ರದ ಮೂರು ಪರಂಪರೆಗಳು, ನಾಟ್ಯದ ಚತುಷ್ಠಯೀ, ಪಂಚತಯೀ, ನಾಟ್ಯ ಮತ್ತು ನಾಟ್ಯವೇದ ಹೀಗೆ ಅನೇಕ ವಿಚಾರಗಳನ್ನು ಡಾ. ತ್ರಿಪಾಠಿಯವರು ಪ್ರಾಸಂಗಿಕ ದೃಷ್ಠಿಕೋನದಿಂದ ನೋಡಿರುವುದನ್ನು ಅಷ್ಟೇ ಮುತುವರ್ಜಿಯಿಂದ ಶ್ರೀ ಅತ್ತಿಮುರುಡು ವಿಶ್ವೇಶ್ವರರು ಕನ್ನಡಕ್ಕೆ ತಂದಿದ್ದಾರೆ.
©2024 Book Brahma Private Limited.