ವಿದ್ವಾಂಸ ಎಂ.ಎಂ. ಕಲಬುರ್ಗಿ ಅವರು ತಮ್ಮ ಸಂಶೋಧನಾ ಪ್ರಬಂಧಗಳನ್ನು ಹಾಗೂ ಇತರ ಬರಹಗಳನ್ನು ವಿಷಯಾನುಸಾರ ವಿಂಗಡಿಸಿ ಆರು ಸಂಪುಟಗಳಲ್ಲಿ ಪ್ರಕಟಿಸಿದ್ದರು. ಪ್ರಕಟಿಸದೇ ಉಳಿದಿದ್ದ ಪ್ರಬಂಧಗಳನ್ನು ಪ್ರಕಟಿಸುವ ಸಿದ್ಧತೆಯಲ್ಲಿರುವಾಗಲೇ ಅನಿರೀಕ್ಷಿತವಾಗಿ ದುಷ್ಕರ್ಮಿಗಳಿಂದ ಹತ್ಯೆಗೀಡಾದರು. ಈ ಘಟನೆಯದ ನಾಲ್ಕು ತಿಂಗಳ ನಂತರ ಅವರ ಪತ್ನಿ ಉಮಾದೇವಿ ಕಲಬುರ್ಗಿಯವರು ಈ ಏಳನೆಯ ಸಂಪುಟವನ್ನು ಪ್ರಕಟಿಸಲು ಮನಸ್ಸು ಮಾಡಿದರು.
ಮರಣೋತ್ತರ ಪ್ರಕಟವಾದ ಈ ಸಂಪುಟದಲ್ಲಿ ಪ್ರಬಂಧ ಪ್ರತಿಕ್ರಿಯೆ, ಪ್ರಸ್ತಾವನೆ, ಪುಸ್ತಕಾವಲೋಕನ, ಭಾಷಣಗಳೆಂಬ ವಿಭಾಗಗಳಿವೆ.
ಮೊದಲ ಭಾಗದಲ್ಲಿ 43 ಪ್ರಬಂಧಗಳಿವೆ. ಅವು, ಬಸವಣ್ಣನವರ ಜೀವನ ಚರಿತ್ರೆ, ಬಸವಣ್ಣ ದಕ್ಷಿಣಭಾರತದ ಪರ್ಯಾಯ ಬುದ್ಧ: ಬಸವಣ್ಣನವರ ಲಿಂಗಾಯತವು ಪೂರ್ಣಧರ್ಮ, 'ಪಂಚಾಚಾರ್ಯರ ನಿಜಸ್ವರೂಪ', 'ಜಗದಾರಾಧ್ಯ ಜಗದ್ಗುರು', 'ವೀರಶೈವ ಇತಿಹಾಸ ಮತ್ತು ಭೋಗೊಲ', 'ಲಿಂಗಾಯತ: ಒಂದು ಸ್ವತಂತ್ರ ಧರ್ಮ'- ಮುಂತಾದ ಆಕರನಿಷ್ಟ ಒಳನೋಟಗಳಿಂದ ಪುಷ್ಟಿಪಡೆದು ಅವರ ಸಮಾಜಮುಖಿ ಚಿಂತನೆಗಳನ್ನು ನಿದರ್ಶಿಸುತ್ತವೆ. ಮುಖ್ಯವಾಗಿ ನಾಥ-ಶೈವ-ವೀರಶೈವ-ಲಿಂಗಾಯತ ಪಂಥಗಳ ನಿರ್ವಚನಗಳು ಇವಾಗಿವೆ. ಅಲ್ಲದೆ ಗ್ರಂಥ ಸಂಪಾದನೆ, ಶಾಸನ ಸಾಹಿತ್ಯ ಸಂಪಾದನೆ, ಜಾನಪದ ಸಾಹಿತ್ಯ ಸಂಪಾದನೆಗಳಿಗೆ ಸಂಬಂಧಿಸಿದಂತೆ ಪಾರಂಪರಿಕ ಪರಿಷ್ಕರಣ ಪದ್ದತಿ ಕೈಬಿಟ್ಟು ನೂತನ ವಿಧಾನಗಳನ್ನು ಹೇಗೆ ಅಳವಡಿಸಿಕೊಳ್ಳಬಹುದೆಂಬುದನ್ನು ಮತ್ತು ಅದರಿಂದಾಗುವ ಪ್ರಯೋಜನ ನಿರೂಪಿಸುವ ಲೇಖನಗಳನ್ನು ಈ ಸಂಪುಟದಲ್ಲಿ ನೋಡಬಹುದು
'ಪ್ರತಿಕ್ರಿಯೆ' ವಿಭಾಗವು ಪತ್ರಿಕೆಗಳಲ್ಲಿ ಧರ್ಮ, ಸಾಹಿತ್ಯ, ಸಮಾಜ, ಸಂಶೋಧನೆ ವಿಚಾರಗಳ ಕುರಿತು ಪ್ರಕಟವಾಗುತ್ತಿದ್ದ ಲೇಖನಗಳಿಗೆ ಕಲಬುರ್ಗಿಯವರು ತೋರಿದ ಭಿನ್ನಾಭಿಪ್ರಾಯರೂಪದ ಬರಹಗಳಿವೆ.
'ಪುಸ್ತಕಾವಲೋಕನ' ಭಾಗವು 12 ಕೃತಿಗಳ ಕುರಿತು ಬರೆದಿರುವ ವಿಶ್ಲೇಷಣಾತ್ಮಕ ಚಿಂತನಗಳನ್ನು ಒಳಗೊಂಡಿದೆ. ಕೊನೆಯದಾದ- 'ಸಂಪಾದಕರ ನುಡಿ' ಭಾಗವು ಇವರು ಬರೆದ ಸಂಪಾದಕೀಯಗಳಿಗೆ ಸಂಬಧಿಸಿದುದಾಗಿದೆ. 'ಭಾಷಣ' ವಿಭಾಗವು ನುಡಿಹಬ್ಬ, ಸಮ್ಮೇಳನ, ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ, ಸಮಾರೋಪ- ಮುಂತಾದ ಸಾಂದಂರ್ಭಿಕ ಭಾಷಣಗಳ ಲಿಖಿತ ರೂಪಗಳನ್ನು ಒಳಗೊಂಡಿದೆ.
©2024 Book Brahma Private Limited.