ಪ್ರಸ್ತುತ ಸಂದರ್ಭದಲ್ಲಿ ಬಸವಣ್ಣನವರಿಂದ ಹಿಡಿದು ಬೇರೆ ಬೇರೆ ವಚನಕಾರರ ವಚನಗಳ ಮರು ಓದು ನಡೆಯುತ್ತಿದೆ. ಹಾಗೆಯೇ ಬದಿಗೆ ಸರಿಯಲ್ಪಟ್ಟ ವಚನಕಾರರ ವಚನಗಳನ್ನು ಪರಿಚಯಿಸುವ ಪ್ರಯತ್ನವೂ ನಡೆಯುತ್ತಿದೆ. ಇಂತಹ ಒಂದು ಪ್ರಯತ್ನದಲ್ಲಿ ಹೊರಬಂದಿರುವ ಪ್ರಮುಖ ಕೃತಿ ಪ್ರೊ. ಎಚ್. ಲಿಂಗಪ್ಪ ಅವರ 'ಅನುಭಾವಿ ವಚನಕಾರರು-ಮಾದಾರ ಚನ್ನಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಮಾದಾರಧೂಳಯ್ಯ. ಈ ಕೃತಿಯಲ್ಲಿ ಶರಣರಾದ ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಮಾದಾರ ಧೂಳಯ್ಯರ ಹೋರಾಟದ ವ್ಯಕ್ತಿತ್ವವನ್ನು, ಅವರ ವಚನಗಳ ಹಿನ್ನೆಲೆಯಲ್ಲಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇವರು 12ನೆ ಶತಮಾನದ ಶರಣ ಚಳವಳಿಯ ಮುಖ್ಯ ಚೇತನಗಳು ಎಂಬುದನ್ನು ಹಲವು ಜನ ಸಂಶೋಧಕರು ಈಗಾಗಲೇ ತಿಳಿಯಪಡಿಸಿದ್ದಾರೆ. ಆದರೆ ಅವೇ ಆಕರ ಮೂಲಗಳಿಂದ ಭಿನ್ನವಾಗಿ ಅನುಭವದ ನೆಲೆಯ ಬದುಕನ್ನು ಸಾಕ್ಷಿ ಪ್ರಜ್ಞೆಯಾಗಿಸಿಕೊಂಡ ಲಿಂಗಪ್ಪನವರು ಶರಣರ ವಚನಗಳ ಮೂಲಕ ಅವರ ಬದುಕಿನ ದರ್ಶನ ಮಾಡಿಸಿರುವುದು ಬಹು ಮಹತ್ವದ ವಿಚಾರವಾಗಿದೆ. ಇಲ್ಲಿ ವಚನಕಾರರ ಬದುಕಿನ ಜೊತೆಗೆ ಅವರು ರಚಿಸಿದ ಅಪರೂಪದ ವಚನಗಳನ್ನು ಈ ಕೃತಿಯಲ್ಲಿ ವಿಶ್ಲೇ಼ಷಿಸಲಾಗಿದೆ.
©2024 Book Brahma Private Limited.