ಯುರಿಪಿಡೀಸ್ ಅವರ 'ಮೀಡಿಯಾ' ನಾಟಕವನ್ನು ಕೆ. ಮರುಳಸಿದ್ದಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ನಾಟಕವು ಎಲ್ಲ ಕಾಲದ ಮಹಾನ್ ಟ್ರಾಜಿಡಿ, ಇದು ಮುಖ್ಯವಾಗಿ ತೀವ್ರ ಭಾವೋದ್ವೇಗವುಳ್ಳ ಹೆಣ್ಣೊಬ್ಬಳ ಕಥೆ. ತನಗೆ ಮೋಸವಾದಾಗ ಅವಳ ಪ್ರೀತಿ ಒಲುಮೆಗಳೆಲ್ಲ ದ್ವೇಷ ಸೇಡುಗಳಾಗಿ ಪರಿವರ್ತನೆ ಹೊಂದುವುದನ್ನು ಈ ನಾಟಕ ಚಿತ್ರಿಸುತ್ತದೆ.
ಗ್ರೀಕ್ ತತ್ವಶಾಸ್ತ್ರದ ಮಿತಿಯರಿತ ಬದುಕು, ಬದುಕಿನಲ್ಲಿ ವಿವೇಕಕ್ಕೆ ಪ್ರಾಮುಖ್ಯ ಇಂಥ ಪ್ರಮುಖ ವಿಷಯಗಳ ಕುರಿತು ನಾಟಕವನ್ನು ಹೆಣೆಯಲಾಗಿದೆ. ನಾಟಕ ಆರಂಭವಾದಾಗ ಪ್ರೇಕ್ಷಕರಲ್ಲಿ ಮೀಡಿಯಾಳ ಬಗ್ಗೆ ಸಹಾನುಭೂತಿ, ಕರುಣೆಗಳು ಮೂಡುತ್ತವೆ. ರಂಗದ ಮೇಲೆ ಅವಳು ಭಗ್ನ ಹೃದಯಿಯಾಗಿ ಕಾಣಿಸಿಕೊಳ್ಳುತ್ತಾಳೆ. ಅವಳನ್ನು ಗಂಡ, ಜೇಸನ್, ತೊರೆದು ಹೋಗಿದ್ದಾನೆ. ಅವಳೀಗ ಅಪರಿಚಿತೆ. ನಗರದಲ್ಲಿ (ಕಾರಿನ್ಸ್) ದಿಕ್ಕು ತೋಚದೆ ಕಂಗಾಲಾಗಿದ್ದಾಳೆ. ಅವಳ ಮನಸ್ಸಿ ನಲ್ಲಿ ಅಸೂಯೆ -ಹತಾಶೆಗಳು ಮಡುಗಟ್ಟಿವೆ. ಜನರ ಲೇವಡಿಗೆ ಅವಳು ಅಂಜಿದ್ದಾಳೆ. ಮೀಡಿಯಾಳ ವ್ಯಕ್ತಿತ್ವ ಅವಳ ಜನಾಂಗದವರಿಗೆ ಸಾಮಾನ್ಯವಾದ ತೀವ್ರ ಭಾವೋದ್ವೇ ಗಕ್ಕೆ ಶರಣಾಗುತ್ತದೆ. ಗಂಡನ ಬಗ್ಗೆ ಇದ್ದ ಆಳವಾದ ಪ್ರೀತಿ ಸುಡುವ ದ್ವೇಷವಾಗಿ ಬದಲಾಗುತ್ತದೆ. ಸೇಡು ತೀರಿಸಿಕೊಳ್ಳುವ ಆಕಾಂಕ್ಷೆ ಮೂಡುತ್ತದೆ. ನಾಟಕದ ಕೊನೆಯ ವೇಳೆಗೆ, ಮೀಡಿಯಾ ತನ್ನ ಸೇಡು ದ್ವೇಷಗಳನ್ನು ಪೂರ್ಣಗೊಳಿಸಿಕೊಂಡ ಮೇಲೆ, ಅತಿಮಾನುಷ 'ಶಕ್ತಿ'ಯಂತೆ ಕಾಣತೊಡಗುತ್ತಾಳೆ.
©2024 Book Brahma Private Limited.