ಸೂರ್ಯನನ್ನು ಕಂಡ ಮನುಷ್ಯ

Author : ಮಾರುತಿ ಶಾನಭಾಗ್

Pages 72

₹ 60.00




Year of Publication: 2008
Published by: ಋಜುವಾತು ಪ್ರಕಾಶನ
Address: # 498, 6ನೇ 'ಎ' ಮೈನ್, ಆರ್.ಎಂ.ವಿ. 2ನೇ ಹಂತ, ಬೆಂಗಳೂರು -560094

Synopsys

ʼಸೂರ್ಯನನ್ನು ಕಂಡ ಮನುಷ್ಯʼ ನಾಟಕವು ಮಕರಂದ ಸಾಠೆಯವರ ಮರಾಠಿ ನಾಟಕ 'ಸೂರ್ಯ ಪಾಹಿಲೆಲಾ ಮಾಣುಸ್', ಅದರ ಕನ್ನಡನುವಾದ. ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದವರು ಲೇಖಕ ಮಾರುತಿ ಶಾನಭಾಗ. ಸಾಕ್ರೆಟೀಸ್‌ನ ಬದುಕಿನ ಸಾರವನ್ನು ನಾಟಕೀಯವಾಗಿ ಕೆಲವೇ ದೃಶ್ಯಗಳಲ್ಲಿ ಹಿಡಿದು ರಂಗಕ್ಕೆ ತರುವ ಸಾರ್ಥಕ ಪ್ರಯತ್ನವಾಗಿ ಈ ನಾಟಕ ಮೂಡಿಬಂದಿದೆ. ಸಾಕ್ರೆಟೀಸ್‌ಗೆ ಸಿಕ್ಕಿದ ಫಲವನ್ನು ನಾಟಕೀಯವಾಗಿ ಚಿತ್ರೀಕರಿಸುತ್ತದೆ. ಕತ್ತಲೆಯ ಗವಿ, ಅಲ್ಲಿಂದ ಹೊರಬಂದ ಮನುಷ್ಯ ಬೆಳಕನ್ನು ಸಹಿಸಲು ಪಡುವ ಪಾಡು, ಅವನನ್ನು ಸಮಾಧಾನಿಸಿ ಬೆಳಕಿಗೆ ಹೊಂದಿಕೊಳ್ಳುವಂತೆ ಮಾಡಲು ಪ್ರಯತ್ನಿಸುವ ಸಾಕ್ರೆಟೀಸ್‌ನ ಅನುಯಾಯಿಗಳು ಹೇಳುವ ಸಾಕ್ರೆಟೀಸ್‌ನ ಕತೆ, ಉದ್ದಕ್ಕೂ ಆತ ಮತ್ತೆ ಬೆಳಕಿನಿಂದ ಕತ್ತಲೆಯ ಗವಿಗೇ ಮರಳುವ ಸಾಧ್ಯತೆಯನ್ನು ಜೀವಂತವಾಗಿರಿಸಿರುವ ರೀತಿ, ಪರೋಕ್ಷವಾಗಿ ಸಾಕ್ರೆಟೀಸ್‌ನನ್ನೂ ಅವನ ಸುತ್ತಲಿನವರನ್ನೂ ಇಂದಿಗೆ ಸಂಬದ್ಧಗೊಳಿಸುವ ಪರಿ ಎಲ್ಲ ಅಚ್ಚುಕಟ್ಟಾಗಿದೆ.

ಈ ಪುಟ್ಟ ನಾಟಕದ ಬಗ್ಗೆ ಸ್ವತಃ ಮಾರುತಿ ಶಾನಭಾಗರೇ ಬರೆದ ಮಾತುಗಳು ಹೀಗಿವೆ: ‘ನಮ್ಮ ಜನಜೀವನದ ಸದ್ಯದ ಒಲವು ನಿಲುವುಗಳನ್ನು ಗಮನಿಸಿದಾಗ, ಅಥೆನ್ಸ್‌ನಲ್ಲಿ ಅಂದು ನಡೆದುಹೋದ ಸಾಮಾಜಿಕ ದುರವಸ್ಥೆ ಇನ್ನೊಮ್ಮೆ ಉಂಟಾಗಿದೆ ಎನ್ನುವುದು ಹೊಳೆಯಬಹುದು. ವಾಸ್ತವದಿಂದ ದೂರ ಸರಿದಿರುವ, ಕಿಲುಬುಗೊಂಡಿರುವ ನಮ್ಮ ವಿವೇಕ ದೃಷ್ಟಿ, ಉಪಯುಕ್ತತಾವಾದದ ವಜ್ರಮುಷ್ಟಿಯಲ್ಲಿ ಕ್ಷೀಣವಾಗುತ್ತಿರುವುದನ್ನು ದುರ್ಲಕ್ಷಿಸಲು ಸಾಧ್ಯವಿಲ್ಲ. ಆಚಾರ ವಿಚಾರಗಳಲ್ಲಿ ಅಸಹಿಷ್ಣುತೆ ತುಂಬಿಕೊಂಡಿದೆ. ಆಡಳಿತದಲ್ಲಿ ಪಾರದರ್ಶಕತೆ ಉಳಿದಿಲ್ಲ. ನೀತಿ ನಗೆಗೇಡಿಗೆ ತುತ್ತಾಗಿದೆ. ನ್ಯಾಯ ಸಂಸ್ಥೆಯ ಬಗ್ಗೆ ಪೀಡಿತರಲ್ಲಿ ಭರವಸೆ ಉಳಿದಿಲ್ಲ. ದೇಶ, ಧರ್ಮದಂಥ ಗೊಡ್ಡು ಮಠಗಳ ವೈಭವೀಕರಣ ನಡೆದಿದೆ. ಇಂತಹ ಸಮಯ ಪ್ಲೇಟೋನ ಗವಿಯ ಕತ್ತಲೆಯ ಅರಳು ಮರಳು ಪರಿಸ್ಥಿತಿಯಿಂದ ಹೊರಬರುವ ಒಬ್ಬ ದಿಟ್ಟನಂತೆ ಎಚ್ಚೆತ್ತವರ ತಂಡವೇ ನಮಗೆ ಈಗ ಬೇಕಾಗಿದೆ. ಸಾಕ್ರೆಟೀಸ್‌ನ ಸಿದ್ಧಾಂತಗಳ ಸ್ಪಷ್ಟ ಮಂಡನೆ ಮನವೊಲಿಸುವಂತಹುದು. ಇದು ಭಾವನೆಗಳ ವೈಭವೀಕರಣದಿಂದ ದೂರ. ಯಾವುದನ್ನೂ ವೈಭವೀಕರಿಸುವ ಹವ್ಯಾಸವಿಲ್ಲ. ಆದರೂ, ಸವಾಲುಗಳು ಹಿಂಜರಿಯುವುದಿಲ್ಲ. ಬಾಳುವೆಯ ಸಂದಿಗೊಂದಿಗಳಿಂದ ಏಳುವ ಈ ಮುಖಾಮುಖಿಗೆ ಸಾಕ್ರೆಟೀಸೋತ್ತರ ಸಮಗ್ರದರ್ಶನದ ಅಗತ್ಯವಿದೆ. ಸಮಚಿತ್ತದಿಂದ ಇವುಗಳನ್ನೆಲ್ಲ ಅಳವಡಿಸಿಕೊಂಡಿರುವುದೇ ಈ ಕೃತಿಯ ಸಿದ್ಧಿ’.

 

 

Related Books