ವಿಜಯ ತೆಂಡುಲಕರ ಪ್ರಖ್ಯಾತ ನಾಟಕಕಾರರು. ಮೂಲ ಮರಾಠಿಗರು. ಮಕ್ಕಳಿಗಾಗಿ ಬರೆದ ಇವರ ನಾಟಕಗಳನ್ನು ಲೇಖಕಿ ಹೇಮಾ ಪಟ್ಟಣಶೆಟ್ಟಿ ಅವರ ’ ತೆಂಡುಲಕರ ಮಕ್ಕಳ ನಾಟಕಗಳು’ ಶಿರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಪರಂಪರಾಗತ ಮಾರ್ಗವನ್ನು ತೊರೆದು, ಭಂಜಿಸಿ ರಂಗಭೂಮಿಗೆ ವಿಜಯ ತೆಂಡುಲಕರ ಅವರು ಹೊಸ ದಿಕ್ಕು-ದೆಸೆ ನೀಡಿದವರು. ಮಕ್ಕಳ ನಾಟಕ ರಚನಾಯಾನದಲ್ಲೂ ಅವರಿಗೆ ವಿಶಿಷ್ಟ ಸ್ಥಾನವಿದೆ. - 'ತೆಂಡುಲಕರ ಮಕ್ಕಳ ನಾಟಕಗಳು' ಕೃತಿಯು ಐದು ನಾಟಕಗಳನ್ನು ಒಳಗೊಂಡಿದೆ. ಇಲ್ಲಿಯ ಪ್ರತಿ ನಾಟಕವೂ ವಸ್ತು ಹಾಗೂ ಶೈಲಿಯಲ್ಲಿ ಭಿನ್ನವಾಗಿದೆ. ಮಕ್ಕಳ ಮುಗ್ಧತೆ, ಕುತೂಹಲ, ಅವರ ಬಾಲ್ಯಸ್ವಭಾವ, ವರ್ತನೆ, ಆಲೋಚನಾ ಕ್ರಮ, ಅವರು ಹಿರಿಯರನ್ನು ಅನುಕರಿಸುವುದು, ಅಪ್ಪ-ಅವ್ವಂದಿರ ಸಂಗ ಬಯಸುವುದು, ಸ್ನೇಹಿತರೊಂದಿಗಿನ ಅವರ ಸಂಬಂಧ, ಆಟೋಟ, ಶಾಲೆಯ ಕಾಟ ಮುಂತಾದ ಎಲ್ಲವೂ ಅವರ ನಾಟಕಗಳಲ್ಲಿ ಹೃದಯಂಗಮವಾಗಿ ಒಡಮೂಡಿವೆ. ಮಕ್ಕಳ ಕಾಲ್ಪನಿಕ ಜಗತ್ತಿಗೆ ಇನ್ನಷ್ಟು ಬಣ್ಣ, ಮೋಜು, ಗಮ್ಮತ್ತು, ಅಚ್ಚರಿಯ ಸಂಗತಿಗಳನ್ನು ಸೇರಿಸುವ ಮೂಲಕ ತೆಂಡುಲಕರ ಅವರು ಮಕ್ಕಳ ಬಗೆಗಿನ ತಮ್ಮ ಪ್ರೀತಿ, ಕಾಳಜಿಗಳನ್ನು ನಾಟಕಗಳ ಮೂಲಕ ಸ್ಪಷ್ಟವಾಗಿ ತೋರ್ಪಡಿಸಿದ್ದಾರೆ
©2024 Book Brahma Private Limited.