ಮಕ್ಕಳ ಮನಸ್ಸಿನ ಸ್ವರೂಪ ಕುರಿತು ಸಾನೆ ಗುರೂಜಿ ಅವರು ಬರೆದ ಮೂಲ ಮರಾಠಿ ನಾಟಕವನ್ನು ಲೇಖಕಿ ಮಾಲತಿ ಮುದಕವಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಹಳಷ್ಟು ಬಾರಿ ಮನುಷ್ಯನ ಹೃದಯವಂತಿಕೆ ಹಾಗೂ ಹಿರಿಮೆ ಅವನ ತಂದೆ-ತಾಯಿಯರನ್ನೇ ಅವಲಂಬಿಸಿರುತ್ತವೆ. ಅವನ ಮುಂದಿನ ಜೀವನದ ಒಳಿತು ಕೆಡುಕುಗಳು ಕೂಡಾ ತಂದೆ-ತಾಯಿಯರನ್ನೇ ಅವಲಂಬಿಸಿರುತ್ತವೆ. ಅವನ ಜೀವನದ ಒಳಿತು-ಕೆಡುಕುಗಳ ಅಡಿಪಾಯವೂ ಕೂಡಾ ಅವನ ಚಿಕ್ಕಂದಿನಲ್ಲಿಯೇ ಹಾಕಲ್ಪಡುತ್ತದೆ. ತೊಟ್ಟಿಲಿನಲ್ಲಿರುವಾಗ, ಅವ್ವನ ಮೈಮೇಲೆ, ಹೆಗಲ ಮೇಲೆ, ಮಡಿಲಲ್ಲಿ ಆಡುತ್ತಿರುವಾಗಲೇ ಭಾವೀ ಜೀವನದ ಬೀಜಾರೋಪಣ ವಾಗುತ್ತಲಿರುತ್ತದೆ..
ತಾಯಿ-ತಂದೆಯರು ಅರಿತೋ, ಅರಿಯದೆಯೋ ಮಕ್ಕಳಲ್ಲಿ ದೊಡ್ಡತನದ ಗುಣಗಳನ್ನೋ, ಸಣ್ಣತನದ ಗುಣಗಳನ್ನೋ ಬಿತ್ತುತ್ತಲೇ ಇರುತ್ತಾರೆ. ಮನುಷ್ಯನು ಜನಿಸುವುದಕ್ಕಿಂತ ಪೂರ್ವದಲ್ಲಿಯೇ ಅವನ ಶಿಕ್ಷಣವು ಪ್ರಾರಂಭವಾಗಿರುತ್ತದೆ. ಅಕ್ಕ-ಪಕ್ಕದ ಇಡಿಯ ಜಗತ್ತು, ಸರ್ವ ಸಜೀವ-ನಿರ್ಜೀವ ಸೃಷ್ಟಿಯೂ ಕೂಡಾ ಒಂದಿಲ್ಲೊಂದು ರೀತಿಯಲ್ಲಿ ಮಗುವಿಗೆ ಶಿಕ್ಷಣವನ್ನು ಕೊಡುತ್ತಲೇ ಇರುತ್ತದೆ. ಆದರೆ, ಸುತ್ತಣ ಪ್ರಪಂಚದ ಸೃಷ್ಟಿಯಿಂದ ಏನು ಕಲಿಯಬೇಕು ಎನ್ನುವುದನ್ನು ಮಾತ್ರ ತಾಯಿ-ತಂದೆಯರೇ ಕಲಿಸುತ್ತಾರೆ. ಮಕ್ಕಳ ಶಿಕ್ಷಣದಲ್ಲಿ ಅತ್ಯಂತ ಹೆಚ್ಚಿನ ಪಾಲು ಮಾತ್ರ ತಾಯಿ-ತಂದೆಯರದೇ ಇರುತ್ತದೆ. ಎರಡು-ಮೂರು ತಿಂಗಳ ಮಗುವನ್ನು ಹೊರಗೆ ಅಂಗಳದಲ್ಲಿ ಮಲಗಿಸಿದರೆ, ಅದರ ಮನಸ್ಸಿನ ಮೇಲೆ ಹಸಿರು ಗಿಡಮರಗಳಿಂದಾಗಿ, ಅದರ ಶರೀರದ ಮೇಲೆ ಆ ಹಸಿರಿನ ಪರಿಣಾಮದಿಂದಾಗಿ ಅವರ ಮನಸ್ಸೂ ಹಸಿರಾಗುತ್ತದೆ ಎಂದು ಹೇಳುತ್ತಾರೆ. ಇದರರ್ಥವೆಂದರೆ ಮಕ್ಕಳ ಮನಸ್ಸು ಚಿಕ್ಕಂದಿನಲ್ಲಿ ಅತ್ಯಂತ ಸಂಸ್ಕಾರಕ್ಷಮತೆಯನ್ನು ಪಡೆದಂಥದಾಗಿರುತ್ತದೆ ಎಂಬುದು. ಇಂತಹ ಚಿಂತನೆಗಳ ನಾಟಕದ ಅನುವಾದ ಇಲ್ಲಿದೆ.
©2024 Book Brahma Private Limited.