ಡಾ. ಕೆ. ಮರುಳಸಿದ್ದಪ್ಪ ಚಿಕ್ಕಮಗಳೂರು ಜಿಲ್ಲೆಯ ಕಾರೇಹಳ್ಳಿ ಗ್ರಾಮದವರು. ತಂದೆ ಉಜ್ಜನಪ್ಪ, ತಾಯಿ ಕಾಳಮ್ಮ. ರಂಗಭೂಮಿ, ನಾಟಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.
ಭಾರತೀಯ ಜಾನಪದ ಸಮೀಕ್ಷೆ, ಲಾವಣಿಗಳು, ಷಟ್ಟದಿ, ಜಾನಪದ ಸಾಹಿತ್ಯ ರಚನಕಾರರು, ಕನ್ನಡ ನಾಟಕ ಸಮೀಕ್ಷೆ, ನೋಟನಿಲುವು, ರಕ್ತಕಣಗೀತೆ ಅವರ ಪ್ರಕಟಿತ ಪುಸ್ತಕಗಳು. 'ಆಧುನಿಕ ಕನ್ನಡ ನಾಟಕ ವಿಮರ್ಶೆ' ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿರುವ ಅವರು ಹಲವು ಇಂಗ್ಲೀಷ್ ನಾಟಕಗಳನ್ನು ಕನ್ನಡೀಕರಿಸಿದ್ದಾರೆ. ಕಿ.ರಂ. ನಾಗರಾಜ ಅವರ ಜೊತೆ ಸೇರಿ ’ವಚನ ಕಮ್ಮಟ’ ಸಂಪಾದಿಸಿದ್ದಾರೆ.