ಜರ್ಮನಿಯ ಕವಿ, ನಾಟಕಕಾರ, ನಿರ್ದೇಶಕನಾದ ಬರ್ಟೋಲ್ಟ್ ಬ್ರೆಕ್ಟ್ ನಾಟಕದ ಕನ್ನಡಾನುವಾದ ’ಅಂಕೆ ತಪ್ಪಿದ ಆರ್ಥುರೋ ಊಯಿ ’. ಜಗತ್ತಿನ ಶ್ರೇಷ್ಠ ನಾಟಕಕಾರನಾದ ಬ್ರೆಕ್ಟ್ ಕನ್ನಡ ರಂಗಭೂಮಿಯಲ್ಲಿ ಕಾಣಿಸಿಕೊಂಡಿದ್ದು 1970-71 ರ ಸುಮಾರಿಗೆ. ರಾಷ್ಟ್ರೀಯ ನಾಟಕ ಶಾಲೆಯ ತಂಡದವರು ಶ್ರೀ ಪೆನ್ನಿ ಅಪೆರಾ ಮತ್ತು ಕಕೇಶಿಯನ್ ಚಾಕ್ ಸರ್ಕಲ್ ನಾಟಕಗಳ ಹಿಂದಿ ರೂಪಗಳನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸ್ತುತಪಡಿಸಿದರು. ಆ ನಾಟಕಗಳಲ್ಲಿ ನಟಿಸಿದ ಕೆಲವು ನಟರು ಭಾರತದ ಬಹುಶ್ರೇಷ್ಠ ನಟನಟಿಯರಾಗಿ ಮುಂದಿನ ದಶಕಗಳಲ್ಲಿ ಬೆಳೆದರು. ಕನ್ನಡದ ಬಿ.ಜಯಶ್ರೀಯವರೂ ಆ ತಂಡದಲ್ಲಿದ್ದರು. ಬಳಿಕ ಬ್ರೆಕ್ಟ್ ನ ನಾಟಕಗಳು ಬಗೆಬಗೆಯಲ್ಲಿ ಕನ್ನಡ ರಂಗಭೂಮಿಯಲ್ಲಿ ಮೈತಳೆಯತೊಡಗಿದವು. ಬ್ರೆಕ್ಟ್ ನಾಟಕಗಳು ಮತ್ತು ಸಿದ್ಧಾಂತಗಳ ಮೋಹದ ಮೂಲಕವೇ ರಂಗಭೂಮಿಗೆ ಬಂದು, ಬೆಳೆದ ನಾಟಕಕಾರ ಸಿ.ಜಿ.ಕೃಷ್ಣಸ್ವಾಮಿ 1990 ರಲ್ಲಿ ದ ರೆಸಿಸ್ಟಬಲ್ ರೈಸ್ ಆಫ್ ಆರ್ಥರೋ ಲೂಯಿ ಎಂಬ ಬ್ರೆಕ್ಟ್ ನಾಟಕವನ್ನು ಕನ್ನಡಕ್ಕೆ ತರಲು ಕೆ.ವಿ.ನಾರಾಯಣರಿಗೆ ಸೂಚಿಸಿದ್ದರು. ಇಂಗ್ಲಿಷ್ ಆವೃತ್ತಿಯ ನಾಟಕವನ್ನು ನೋಡಿದ್ದ ಕೆ.ವಿ.ನಾರಾಯಣ ಅವರು ಆ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲ ನಾಟಕವನ್ನು ಕೊಂಚ ರೂಪಾಂತರಿಸಿ ಕನ್ನಡ ರಂಗಭೂಮಿಗೆ ಹೊಂದುವಂತೆ ಆ ನಾಟಕವನ್ನು ಅನುವಾದಿಸಲಾಗಿದೆ.
©2024 Book Brahma Private Limited.