ಕನ್ನಡ ಜಾನಪದ ನಾಟಕಗಳ ಪೈಕಿ ‘ಶ್ರೀ ಕೃಷ್ಣ ಪಾರಿಜಾತ’ವೂ ಒಂದು. ಉತ್ತರ ಕರ್ನಾಟಕ ಮೂಲದ ಈ ನಾಟಕವು ತನ್ನದೇ ಆದ ಜಾನಪದ ಸೊಗಡಿನಿಂದ ಇಂದಿಗೂ ಕಂಗೊಳಿಸುತ್ತದೆ. ಪುರಾಣದ ಕಥೆಯನ್ನು ಹೊಂದಿರುವ ಈ ನಾಟಕವು ಶ್ರೀ ಕೃಷ್ಣ ಹಾಗೂ ಇಬ್ಬರು ಪತ್ನಿಯರಾದ ರುಕ್ಮಿಣಿ -ಸತ್ಯಭಾಮೆಯರನ್ನು ಕುರಿತಾಗಿದೆ. ನಾರದ ಮುನಿಯು ಸ್ವರ್ಗದಿಂದ ತಂದ ಪಾರಿಜಾತದ ಹೂವನ್ನು ಪಡೆದುಕೊಳ್ಳಲು ಈ ಇಬ್ಬರಲ್ಲಿಯ ಸವತಿ ಮತ್ಸರವು ನಾಟಕದ ಪ್ರಮುಖ ಅಂಶ. ಮೇಲ್ನೋಟಕ್ಕೆ ತುಂಬಾ ಸರಳ ಕಥಾ ಸಾಹಿತ್ಯ ಇದೆ ಎಂದುಕೊಂಡರೂ ಈ ನಾಟಕವು ಶ್ರೀಮಂತ ಸಂಭಾಷಣೆಯಿಂದ ಆಕರ್ಷಿಸುತ್ತದೆ ಮಾತ್ರವಲ್ಲ; ಮನುಷ್ಯನಲ್ಲಿಯ ಸಹಜ ಭಾವನೆ-ಸಂವೇಗಗಳ ಸ್ವಭಾವಗಳನ್ನುಜಾಗತಿಕವಾಗಿ ಪರಿಚಯಿಸುತ್ತದೆ. ಇಂತಹ ಸಹಜ ಸ್ವಭಾವದ ವರ್ತನೆಯ ಭಾವಗಳು ದೇವಾನುದೇವತೆಗಳಲ್ಲೂ ಕಾಣಬಹುದು ಎಂಬ ಅಂಶವನ್ನುಸ್ಪಷ್ಟಪಡಿಸುತ್ತದೆ. ನಾಟಕದ ಒಟ್ಟು ಪರಿಣಾಮ ಎಂದರೆ, ಸಹಜವಾದ ಹಾಸ್ಯ, ತಾತ್ವಿಕತೆ ಹಾಗೂ ಪ್ರಾದೇಶಿಕ ಸೊಗಡಿನ ಅನುಭವವನ್ನು ದಟ್ಟವಾಗಿಸುತ್ತದೆ. ಜಾನಪದ ಸಿರಿವಂತಿಕೆಯ ಈ ನಾಟಕವನ್ನು ಲೇಖಕ ಡಾ. ಬಸವರಾಜ ನಾಯ್ಕರ್ ಅವರು ಇಂಗ್ಲಿಷ್ ಸಾಹಿತ್ಯಕ್ಕೆ ಅನುವಾದಿಸಿದ್ದು, ಈ ನಾಟಕದ ಸಾಹಿತ್ಯ ಉತ್ಕೃಷ್ಟತೆಗೆ ಗರಿ ಮೂಡಿಸಿದ್ದಾರೆ.
©2024 Book Brahma Private Limited.