ತೊಗಲ ಚೀಲದ ಕರ್ಣ- ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಅವರ ಕೃತಿ. ಈ ಕೃತಿಗೆ 2017 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಮಹಾಭಾರತದಲ್ಲಿ ಎದ್ದು ಕಾಣುವ ಎರಡು ಶೋಷಿತ ಪಾತ್ರಗಳೆಂದರೆ ಕರ್ಣ ಮತ್ತು ಏಕಲವ್ಯ ಇವರನ್ನು ಕುರಿತು ನಮ್ಮ ಪೂರ್ವಸೂರಿಗಳ್ಯಾರೂ ಮಹಾಕಾವ್ಯವನ್ನು ರಚಿಸಿಲ್ಲ. ಕುವೆಂಪು ಅವರನ್ನು ಒಳಗೊಂಡಂತೆ (ಕಾನೀನ) ಅನೇಕರು ನಾಟಕಗಳನ್ನು ಬರೆದದ್ದುಂಟು. ತೊಗಲ ಚೀಲದ ಕರ್ಣ ಮಹಾಕಾವ್ಯದ ಹರಹಿಗೆ ಸಿಕ್ಕದಿದ್ದರೂ ಖಂಡಕಾವ್ಯ ಅಥವಾ ನೀಳ್ಗಾವ್ಯ ಎನ್ನಲು ಅಡ್ಡಿಯಿಲ್ಲ. ಆದರೆ ಕವಿಯ ಪ್ರಯತ್ನ ಹಾಗೂ ಪ್ರಯೋಗವನ್ನು ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ.
ಮಹಾಭಾರತದಲ್ಲಿ ಸೂತಪುತ್ರ, ದಾಸೀಪುತ್ರ ಎಂದು ಕರೆಯುವ ಪಾತ್ರಗಳೆಲ್ಲವೂ ಅಸ್ಪೃಶ್ಯ ಪಾತ್ರಗಳೇ. ಅವರು ಅನುಭವಿಸುವ ಅವಮಾನಗಳು ಜಾತಿಮೂಲವಾದ ಅಸ್ಪೃಷ್ಯತಾಚರಣೆಯನ್ನು ಮರುವ್ಯಾಖ್ಯಾನಿಸಲು ಈ ಕವಿ ಕರ್ಣನನ್ನು ಆಯ್ಕೆ ಮಾಡಿಕೊಂಡು, ಅವನನ್ನು ಅಸ್ಪೃಶ್ಯನನ್ನಾಗಿಸಿರುವುದು ಚೇತೋಹಾರಿಯಾಗಿದೆ. ಕಲಿತ ದಲಿತನೊಬ್ಬ ಈಗ ತನ್ನ ಅಸ್ಮಿತೆಯ ಹುಡುಕಾಟದಲ್ಲಿದ್ದಾನೆ. ಆ ಕಾರಣದಿಂದಾಗಿ ಅವನಲ್ಲಿ ರಾಜಕೀಯ ಪ್ರಜ್ಞೆ ಅಂತಸ್ಥವಾಗಿದೆ. ಭಾರತ ಎಷ್ಟೇ ಆಧುನಿಕವಾಗುತ್ತಿದ್ದರೂ, ನಾಗರಿಕತೆ ಬದಲಾಗುತ್ತಿದ್ದರೂ, ವರ್ಣಪ್ರಜ್ಞೆ ಮತ್ತು ಜಾತಿಪ್ರಜ್ಞೆ ಬದಲಾಗಿಲ್ಲ. ಮತ್ತಷ್ಟು ಸ್ಥಾಯಿಯಾಗುತ್ತಿದೆ. ಮಹಾಭಾರತವನ್ನು ಹೆಚ್ಚು ಇತಿಹಾವನ್ನಾಗಿ ನೋಡುವ ಪರಿಪಾಠವಿದೆ. ಈ ದೇಶದಲ್ಲಿ ಅಂತಹುದೇ ರಾಜಕೀಯ ಪರಂಪರೆ ಇನ್ನೂ ಮುಂದುವರೆದಿದೆ. ಕರ್ಣ ರಾಜನಾಗಬೇಕಾದರೆ ದುರ್ಯೋಧನನ ಔದಾರ್ಯ ಬೇಕೇಬೇಕು. ಗೊಲ್ಲನನ್ನು, ಬೇಡನನ್ನು ಮುಂದಿಟ್ಟುಕೊಂಡು ಮಾಡುವ ಸೂತ್ರಧಾರೀ ರಾಜಕಾರಣ ಇಂದಿಗೂ ಕಣ್ಣ ಮುಂದಿರುವ ಸತ್ಯವೇ ಆಗಿದೆ. ಈ ಸಂದಿಗ್ಧ ಸ್ಥಿತಿಯನ್ನು ಕರ್ಣನ ಮೂಲಕ ಎದುರಾಗುವ ಕವಿ, ಭಾರತದ ವೃಣ ಇತಿಹಾಸವನ್ನು ಮತ್ತೆ ಮತ್ತೆ ಕೆದಕುತ್ತಾನೆ. ಈ ಎಲ್ಲಾ ಕಾರಣಗಳಿಂದಲೂ ಎಚ್.ಲಕ್ಷ್ಮೀನಾರಾಯಣಸ್ವಾಮಿ ಅವರ ತೊಗಲ ಚೀಲದ ಕರ್ಣ ಕೃತಿ ಮುಖ್ಯವಾಗುತ್ತದೆ.
©2024 Book Brahma Private Limited.