‘ಶ್ರೀರಾಮ ಪರೀಕ್ಷಣಂ’ ಡಿ.ವಿ.ಜಿ ಅವರು ಶ್ರೀರಾಮನ ಕುರಿತು ಬರೆದ ಮಹಾಕಾವ್ಯ. ಶ್ರೀರಾಮನು ಪುರಾಣ ಪುರುಷನಾದರೂ ಮನುಷ್ಯಲೋಕದಿಂದ ಹೊರಗಿರುವವನಲ್ಲ. ಆತನು ಕೂಡ ವಿಚಾರ ಮಾಡಿದ್ದಾನೆ, ಸಾಧನೆ ಮಾಡಿದ್ದಾನೆ, ಮತ್ತು ಕತ್ತಲೆಯಿಂದ ಬೆಳಕಿಗೆ ಬಂದಿದ್ದಾನೆ. ಅಹಲ್ಯ, ವಾಲಿ, ಸೀತೆ ಮೊದಲಾದ ಪಾತ್ರಗಳು ಶ್ರೀರಾಮನು ನಡೆಸಿದ ಸಾಧನೆಯಲ್ಲಿ ಕ್ರಮಶಃ ಬರುವ ಮೆಟ್ಟಿಲುಗಳು, ಪಾಪ ವೃತ್ತಾಂತದಿಂದ ಮನಃಪರಿತಾಪ; ಆತ ತಾಪದಿಂದ ಧರ್ಮ ವಿಚಾರ ಕುತೂಹಲ; ಈ ವಿಚಾರ ಕುತೂಹಲದಿಂದ ಮಾನವಸ್ವಭಾವ ಪರಾಮರ್ಶೆ; ಅದರಿಂದ ಸೃಷ್ಟಿ ತತ್ತ್ವಚಿಂತನೆ, ವಿಶ್ವಸಹಾನುಭೂತಿ, ವಿಶ್ವವ್ಯಾಪಕ ದೃಷ್ಟಿ, ಪರತತ್ವದರ್ಶನ, ಪರಮಶಾಂತಿ-ಇವು ಹೇಗೆ ಕ್ರಮಕ್ರಮವಾಗಿ ಶ್ರೀರಾಮನಲ್ಲಿ ನೆಲೆಗೊಂಡವೆಂಬುದನ್ನೂ, ಸಂಕ್ಷೋಭೆಯಿಂದ ಸ್ವಸ್ಥಭಾವಕ್ಕೆ ಆ ಉತ್ತಮಜೀವ ಹೇಗೆ ಯಾತ್ರೆ ನಡಸಿತೆಂಬುದನ್ನೂ ಡಿ.ವಿ.ಜಿ. ಅವರು ನಮ್ಮ ಮುಂದಿಟ್ಟಿದ್ದಾರೆ.
ಈ ಆತ್ಮಸಂಸ್ಕಾರದ ಚಿತ್ರವನ್ನು ಸುಲಭವಾಗಿ ನಾವು ಗ್ರಹಿಸುವಂತೆ ಆಯಾ ಪಾತ್ರಗಳನ್ನು ತಂದುಕೊಂಡು, ಅವರವರ ಬಾಯಿಂದಲೇ ಅವರವರ ಮನೋಭಾವಗಳನ್ನೂ ವಾದಗಳನ್ನೂ ಹೇಳಿಸಿ, ನಾಟಕದ ದಿವ್ಯಕಳೆಯನ್ನು ಈ ಕಾವ್ಯಕ್ಕೆ ಕೊಟ್ಟಿದ್ದಾರೆ.
ರಸಜ್ಞರಿಗೆ ಕಾವ್ಯಾಮೃತ, ಲೌಕಿಕರಿಗೆ ಧರ್ಮಸೂಕ್ಷ್ಮಗಳ ಮತ್ತು ಜೀವನರಹಸ್ಯಗಳ ಬೋಧೆ, ಅಧ್ಯಾತ್ಮ ಜ್ಞಾನ ಈ ಮೂರೂ ಈ ಸಣ್ಣ ಕಾವ್ಯದಲ್ಲಿ ದೊರೆಯುವುದರಿಂದ ನಮ್ಮ ಜೀವನಯಾತ್ರೆಯೂ ಸಹ ಕ್ರಮವಾಗಿ ಈ ಮೆಟ್ಟಿಲುಗಳನ್ನು ಹತ್ತಿ ಕಡೆಗೆ ಮೌನಗಂಭೀರದ ನಿತ್ಯಶಾಂತಿಯಲ್ಲಿ ಪರಿಣಾಮಕಾರಿಯಾಗಲೆಂದು ಡಿ.ವಿ.ಜಿ. ಹಾರೈಸುತ್ತಾರೆಂದು ತೋರುತ್ತದೆ. ಡಿ.ವಿ.ಜಿ. ಅವರು ಪೂರ್ವಿಕರೂ ಅಹುದು, ಆಧುನಿಕರೂ ಅಹುದು ಎಂಬುದನ್ನು ಈ ಸಣ್ಣ ಕಾವ್ಯ ಚೆನ್ನಾಗಿ ತೋರಿಸಿಕೊಡುತ್ತದೆ.
©2024 Book Brahma Private Limited.