ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ-ನಾಟಕಕಾರ ಚಂದ್ರಶೇಖರ ಕಂಬಾರ ಮಹಾಕಾವ್ಯ ಚಕೋರಿ. ಕನ್ನಡ ಸಾಹಿತ್ಯ ಮತ್ತು ಕಾವ್ಯ ಪರಂಪರೆಯಲ್ಲಿ ಚಕೋರಿ ಮಹತ್ವದ ಕೃತಿ ಎಂದು ಪರಿಗಣಿತವಾಗುತ್ತಿದೆ. ಕಂಬಾರರ ಸ್ವೋಪಜ್ಞಶೀಲ ಮನಸ್ಸು ಕಾವ್ಯ ಕಟ್ಟುವ ಕ್ರಮಕ್ಕೆ ಈ ಕೃತಿ ಸಾಕ್ಷಿಯಾಗಿದೆ. ಕವಿ-ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಅವರು ಈ ಮಹಾಕಾವ್ಯದ ಕುರಿತು ’ಇಡೀ ಕನ್ನಡ ಕಾವ್ಯ ಪರಂಪರೆಯನ್ನು ಹಿನ್ನೆಲೆಯಲ್ಲಿಟ್ಟು ನೋಡಿದಾಗಲೂ ಇದು ಮಹತ್ವದ ಪ್ರಯೋಗವಾಗಿದೆ. 'ಚಕೋರಿ'ಯ ಬಹುಕುಳವಾದ ಭಾಷೆ ತೆರೆದಿಡುವ ಅನುಭವಲೋಕ ನನ್ನ ಪ್ರಕಾರ ಇಲ್ಲಿಯವರೆಗೆ ಕನ್ನಡ ನುಡಿ ಕಂಡಿರುವ ಎಲ್ಲ ವಿಸ್ಮಯಗಳಿಗಿಂತ ಭಿನ್ನವಾದ ಇನ್ನೊಂದು ವಿಸ್ಮಯ. ಸಮಕಾಲೀನ ಪ್ರಸ್ತುತತೆಯ ಸೋಗು ಅಥವಾ ಸ್ಲೋಗನ್ನುಗಳನ್ನು ಹಾಕದೆ ಕಂಬಾರರ 'ಚಕೋರಿ' ಒಂದು ದೊಡ್ಡ ಸಮಕಾಲೀನ ಅಗತ್ಯವನ್ನು ಪೂರೈಸುತ್ತದೆ. ಕಂಬಾರರ ಮಿಥಿಕ ದೃಷ್ಟಿ ನೈಜೀರಿಯಾದ ವೊಲೆ ಶೋಯಂಕಾನ ಮಿಥಿಕ ದೃಷ್ಟಿಯನ್ನು ಹಲವು ರೀತಿಯಲ್ಲಿ ಹೋಲುವಂಥದು. ಶೋಯಂಕಾ ತನ್ನ ಯರೂಬಾ ಬಣದ ಸ್ಮೃತಿಗಳನ್ನು ಆಧರಿಸಿ ಇವತ್ತಿನ ಜಾಗತಿಕ ಅನುಭವದ ಸ್ಥಿರಬಿಂದುಗಳನ್ನು ತನ್ನ ಕೃತಿಯ ಮುಖೇನ ಯುರೋಪಿನ ಮೇಲುಸಂಸ್ಕೃತಿಗಳ ಕಥನಕ್ಕೆ ಪ್ರತಿಯಾಗಿ ಕಟ್ಟಿದ್ದಾನೆ. ಕಂಬಾರರ ಮಿಥಿಕ ದೃಷ್ಟಿ ಯುರೋಪಿನ ಮೇಲುಸಂಸ್ಕೃತಿಗಳಿಗಿಂತ ಭಿನ್ನವಾಗಿರುವುದಲ್ಲದೆ ಭಾರತದ ಅಫಿಷಿಯಲ್ ಸಂಸ್ಕೃತಿ (ರಾಮಾಯಣ, ಮಹಾಭಾರತ ಇತ್ಯಾದಿ)ಗಳ ಅಂಚಿನ ದ್ರವ್ಯಗಳಿಂದ ನಿರ್ಮಾಣವಾದುದು. ಹೀಗೆ ಮೇಲು ಪರಂಪರೆಯ ಹಿಡಿತದಿಂದ ಪೂರ್ತಿ ಬಿಡಿಸಿಕೊಂಡ ಕವಿಗಳು ಈ ಶತಮಾನದಲ್ಲಿ ಇನ್ಯಾರೂ ನೆನಪಾಗುತ್ತಿಲ್ಲ. ಒಂದು ವಿಚಿತ್ರ ರೀತಿಯಲ್ಲಿ ಕಂಬಾರರು ಹರಿಹರ, ಚಾಮರಸ ಮತ್ತು ಜನಪದ ಕಾವ್ಯಗಳ ಪರಂಪರೆಯನ್ನು ಇನ್ನೊಂದು ಕಲಾತ್ಮಕ ಎತ್ತರಕ್ಕೆ ಒಯ್ದಿದ್ದಾರೆ. ಆದ್ದರಿಂದಲೇ 'ಚಕೋರಿ'ಯ ಸಾಂಸ್ಕೃತಿಕ ಮೌಲ್ಯ ಅದರ ಕಾವ್ಯಾತ್ಮಕ ಮೌಲ್ಯದಷ್ಟೇ ಅಗ್ಗಳವಾದುದು.... ಕನ್ನಡ ಕಾವ್ಯ ಪರಂಪರೆಗಳ ಅಪೂರ್ವಸಿದ್ದಿಯಾಗಿ ಈ ಕೃತಿ ನಮ್ಮ ಮುಂದಿದೆ’ ಎಂದು ವಿಶ್ಲೇಷಣೆ ಮಾಡಿದ್ದಾರೆ.
©2024 Book Brahma Private Limited.