ಶ್ರೀರಾಮಾಯಣ ದರ್ಶನಂ

Author : ಕುವೆಂಪು (ಕೆ.ವಿ. ಪುಟ್ಟಪ್ಪ)

Pages 885

₹ 200.00




Year of Publication: 2017
Published by: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
Address: ಮೈಸೂರು ವಿಶ್ವವಿದ್ಯಾಲಯ, ಮೈಸೂರು

Synopsys

ಕುವೆಂಪು ಅವರು ಮಹಾಕಾವ್ಯ ’ಶ್ರೀರಾಮಾಯಣ ದರ್ಶನಂ’. ಇದು ನಾಲ್ಕು ಸಂಪುಟಗಳ, 50 ಸಂಚಿಕೆಗಳ, 22284 ಸಾಲುಗಳ ಮಹಾಕಾವ್ಯ. ಮೊದಲು ಎರಡು ಮಹಾ ಸಂಪುಟಗಳಲ್ಲಿ ಪ್ರಕಟವಾಗಿತ್ತು. ಇದರ ರಚನೆಯ ಕಾಲ 27 ಜನವರಿ 1936 (2 ಫೆಬ್ರುವರಿ 1936) ರಿಂದ 12 ಜನವರಿ 1942ರ ಬೆಳಿಗ್ಗೆ 11 ಘಂಟೆ 11 ನಿಮಿಷ.

[ಮಹಾ ಸಂಪುಟ 1: ಅಯೋಧ್ಯಾ ಸಂಪುಟಂ-11 ಸಂಚಿಕೆಗಳು ; ಕಿಷಿಂಧಾ ಸಂಪುಟಂ-12 ಸಂಚಿಕೆಗಳು, ಮಹಾ ಸಂಪುಟ 2: ಲಂಕಾ ಸಂಪುಟಂ-14 ಸಂಚಿಕೆಗಳು ; ಶ್ರೀ ಸಂಪುಟ-13 ಸಂಚಿಕೆಗಳು.] ಇದು 1949ರಲ್ಲಿ ಮೊದಲಿಗೆ ಪ್ರಕಟವಾಗಿತ್ತು. (ಎರಡು ಭಾಗಗಳು).

 

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Awards & Recognitions

Reviews

ಶ್ರೀ ರಾಮಾಯಣ ದರ್ಶನಂ

 ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಮೊಟ್ಟಮೊದಲ ಬಾರಿಗೆ (1955) ಪಡೆದ ಕನ್ನಡ ಗ್ರಂಥ 'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯ. ಇದು 'ಮಹಾಛಂದಸ್ಸಿನಲ್ಲಿ ರಚಿತವಾಗಿದೆ. ಇಂಗ್ಲಿಷ್ ಮತ್ತು ಅನೇಕ ಯೂರೋಪಿಯನ್ ಭಾಷೆಗಳಲ್ಲಿ ಅಗಾಧವಾದ ಪಾಂಡಿತ್ಯವನ್ನು ಗಳಿಸಿಕೊಂಡಿದ್ದ ದಿವಂಗತ ಮಂಜೇಶ್ವರ ಗೋವಿಂದ ಪೈ ಅವರು, ಇಪ್ಪತ್ತೆರಡು ಸಾವಿರದ ಇನ್ನೂರ ತೊಂಬತ್ತಾರು ಪಂಕ್ತಿಗಳ, ಈ ಮಹಾಕಾವ್ಯವನ್ನು ಕುರಿತು ಒಮ್ಮೆ ಹೇಳಿದರು: "ಮಿಲ್ಟನ್ ಕವಿಯ 'ಪ್ಯಾರಡೈಸ್ ಲಾಸ್ಟ್' ಮತ್ತು ’ಪ್ಯಾರಡೈಸ್ ರೀಗೆಯಿನ್ಡ್' ಕಾವ್ಯಗಳ ಅನಂತರ ಜಗತ್ತಿನ ಬೇರಾವ ಭಾಷೆಯಲ್ಲೂ ಇಂತಹ ಅದ್ಭುತ ಪ್ರಮಾಣದ ಮಹಾಕಾವ್ಯ ರಚಿತವಾಗಿಲ್ಲ. ಹೀಗೆ ಇಪ್ಪತ್ತನೆಯ ಶತಮಾನದಲ್ಲಿ ಈ ಪ್ರಮಾಣದ ಮಹಾಕಾವ್ಯವನ್ನು ಜಗತ್ತಿಗೆ ನೀಡಿ ದೇಶಭಾಷೆಗಳಲ್ಲಿ ಕನ್ನಡ ಏಕೈಕ ಭಾಷೆಯಾಗಿ ಶೋಭಿಸುತ್ತಿದೆ”.

ರಾಮಾಯಣದ ಕಥೆ ಹಳೆಯದು. ನಮ್ಮ ಜನತೆಯ ಪ್ರಜ್ಞೆಯ ಭಾಗವಾಗಿ ಪರಿವರ್ತಿತವಾಗಿರುವ ಈ ಚಿರಪರಿಚಿತ ಕಥೆಯನ್ನು ಆರಿಸಿಕೊಂಡು ಕವಿ ತಮ್ಮ ನೂತನ ದರ್ಶನಕ್ಕೆ ಅನುಗುಣವಾಗಿ ಅದನ್ನು ಎರಕಹೊಯ್ದಿದ್ದಾರೆ. ವಿಚಾರ, ವಿಜ್ಞಾನ, ಸರ್ವಧರ್ಮ ಸಮನ್ವಯ, ನವೋದಯ, ಸರ್ವ ಸಮಾನತೆಗಳು ಈ ಯುಗದ ವಿಶೇಷ ಲಕ್ಷಣಗಳು ಎಂದು ಗುರುತಿಸುವುದಾದರೆ ಅದೂ ರಾಮಾಯಣದರ್ಶನಂ ಮಹಾಕಾವ್ಯದಲ್ಲಿ ಹಾಸುಹೊಕ್ಕಾಗಿ ಹಳೆಯ ಕತೆಯನ್ನು ಹೊಸದುಗೊಳಿಸಿದೆ. ಪಾತ್ರಗಳು, ಘಟನೆಗಳು ಉಚಿತವಾಗಿ, ಹದ ಮೀರದಂತೆ ಬದಲಾಗಿವೆ. ಮಂಥರೆ ಕವಿಯ ಮತ್ತು ಸಹೃದಯರ ಕನಿಕರಕ್ಕೆ ಪಾತ್ರಳಾಗುತ್ತಾಳೆ. ಊರ್ಮಿಳೆ ಅಜ್ಞಾತವಾಸದಿಂದ ಗಂಭೀರವಾಗಿ ಹೊರಬಂದು ಸಹೃದಯರ ಗೌರವವನ್ನು ಪಡೆಯುವ ಕಣ್ಣು ಕೋರೈಸದ ಬೆಳಕಿನಲ್ಲಿ ತಪಸ್ಸಿನಿಯಾಗಿ ಕುಳಿತಿರುವಂತೆ ಚಿತ್ರಿತಳಾಗಿದ್ದಾಳೆ. ವಹ್ನಿ-ರಂಹರೆಂಬ ಸಾಮಾನ್ಯ ಸೈನಿಕರಿಬ್ಬರು ಯುದ್ಧ ಎಂಬುದು ಎಷ್ಟು ಭಯಂಕರವಾದುದು ಎಂಬುದನ್ನು ಹೃದಯ ಸ್ಪರ್ಶಿಯಾಗಿ ಚಿತ್ರಿಸುವುದರಲ್ಲಿ ಕವಿ ನಡೆಸಿದ ಪ್ರಯತ್ನದ ಯಶಸ್ಸಿನ , ಪ್ರತೀಕವಾಗಿ ಸರ್ವಮಾನ್ಯರಾಗಿದ್ದಾರೆ. ಘಟನೆಗಳೂ ಅಷ್ಟೇ ಸೀತೆಯ ಪಾತಿವ್ರತ್ಯವನ್ನು ಪರೀಕ್ಷಿಸಲು ಜ್ವಲಿತವಾದ ಅಗ್ನಿ ರಾಮನ ಸತೀವ್ರತವನ್ನೂ ಜ್ವಲಿಸಿ ತೋರಿಸುತ್ತದೆ. ಶೈಲಿಯಾದರೋ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಾ ’ಔಚಿತ್ಯ’ ತತ್ವಕ್ಕೆ ಸೋಜ್ವಲವಾದ ನಿದರ್ಶನವಾಗಿದೆ. ಉಪಮೆಗಳು, ಮಹೋಪಮೆಗಳು, ವಿಜ್ಞಾನೋಪಮೆಗಳು, ರೂಪಕಗಳು ಕವಿಪ್ರತಿಭೆಯು ಮುಟ್ಟಬಹುದಾದ ಎಲ್ಲ ಎತ್ತರಗಳನ್ನೂ ತೋರಿಸಿವೆ. 

ಈ ಕಾವ್ಯ ನೀಡುವ ಅನುಭವಗಳು ಯಾವುದೇ ಮಹತ್ತಾದ ಕಾವ್ಯ ನೀಡುವ ಅನುಭವಗಳಂತೆ ವ್ಯಕ್ತಿಯ ಬೆಳವಣಿಗೆಯನ್ನು ಅನುಸರಿಸಿ ಬೆಳೆಯುತ್ತಾ ಹೋಗುತ್ತವೆ. ಇಂದ್ರಿಯಗಳ ವಲಯದಲ್ಲಿ ಹೇಗೋ ಅತೀಂದ್ರಿಯದ ವಲಯದಲ್ಲಿ, ಮನಸ್ಸಿನ ವಲಯದಲ್ಲಿ ಹೇಗೋ ಅತಿ ಮಾನಸದ ವಲಯದಲ್ಲಿ ಶಾಶ್ವತ ಮೌಲ್ಯದ ರಸಾನುಭವವನ್ನು ನೀಡುವ ಇಂತಹ ಕೃತಿಗಳು ವಿರಳ.

- ಡಾ. ಪ್ರಭುಶಂಕರ

 

ಶ್ರೀ ರಾಮಾಯಣ ದರ್ಶನಂ (ಮಹಾಕಾವ್ಯ)

ಮೊದಲನೆಯ ಸಮಗ್ರ ಆವೃತ್ತಿ 1955

ಉದಯರವಿ ವಾಣಿವಿಲಾಸಪುರಂ ಮೈಸೂರು 

ಕ್ರೌನ್ ಅಷ್ಟ 888 ಪುಟಗಳು ಬೆಲೆ 6 ರೂಪಾಯಿ

ಕೃಪೆ: ಗ್ರಂಥಲೋಕ, ಜೂನ್‌ 1981

 

Related Books