‘ನಾಗ್ದಾಳೆ’ ಕವಿ, ಕಥೆಗಾರ ಚೀಮನಹಳ್ಳಿ ರಮೇಶ್ ಬಾಬು ಅವರ ಖಂಡಕಾವ್ಯ- ಆಧುನಿಕ ಜಗತ್ತಿನ ಗಿಲೀಟುಗಳು ಅಸಲಿ ಕವಿಯ ಮುಂದೆ ನಡೆಯುವುದಿಲ್ಲ ಸಿದ್ಧಮಾದರಿಗಳನ್ನು ಮುರಿಯುವ ಸಾಹಸಗಳು ಆಗಾಗ ಸಂಭವಿಸುತ್ತವೆ. ಅಂಥದ್ದೊಂದು ಪ್ರಯತ್ನವೇ ಕಥೆಗಾರ ಮತ್ತು ಕವಿ ಚೀಮನಹಳ್ಳಿ ರಮೇಶಬಾಬು ಅವರ ಖಂಡಕಾವ್ಯ ‘ನಾಗ್ದಾಳೆ’. ಮಹಾಕಾವ್ಯಗಳ ಮಧ್ಯಸ್ತರಗಳೆಂದು ಈ ಖಂಡಕಾವ್ಯಗಳನ್ನು ಹೇಳಲಾಗುತ್ತದೆ. ಓದಬಹುದು, ಗೇಯತೆಯೂ ಉಂಟು.
ಈ ನಾಗ್ದಾಳೆ, ಅದೇ ಪಾಪಸ್ ಕಳ್ಳಿ, ಕತ್ತಾಳೆ ಎಲ್ಲಾ ಊರಿನಲ್ಲಿಯೂ ಸಾಮಾನ್ಯ. ಬರಗಾಲದಲ್ಲೂ ಬಗ್ಗದ ನಾಗ್ದಾಳೆಯ ಮೈತುಂಬಾ ಮುಳ್ಳು. ಹಣ್ಣು ಬಿಡಿಸಿಕೊಂಡರೆ, ಅದರೊಳಗೊಂದು ಗೊಡ್ಡು ಮುಳ್ಳು. ಹೇಗೋ ತಿರುಳನ್ನು ಬಿಡಿಸಿಕೊಂಡು ಬಾಯಲ್ಲಿಟ್ಟುಕೊಂಡರೆ ರುಚಿಗೆ ನಾಲಿಗೆಯು ಸಲಾಂ ಹೇಳುತ್ತದೆ. ಇಂಥ ನಾಗ್ದಾಳೆಯನ್ನು ರೂಪಕವಾಗಿಟ್ಟುಕೊಂಡು ಚೀಮನಗಳ್ಳಿ ಅವರು ಖಂಡಕಾವ್ಯವನ್ನು ಕಟ್ಟಿದ್ದಾರೆ. ಊರ ಹೊರಗಿನ ನಾಗ್ದಾಳೆಯನ್ನಷ್ಟೇ ನಾವುಗಳು ಕಂಡಿದ್ದರೆ, ಇಲ್ಲಿ ಕವಿ ಊರೊಳಗಿನ ಅಸಂಖ್ಯ ನಾಗ್ದಾಳೆಗಳು ಸಾರ್ಥಕ ಬದುಕನ್ನು ಸವೆಸಿರುವುದನ್ನು, ಬಾಳುತ್ತಲೂ ಇರುವುದನ್ನು ತೋರಿಸಿದ್ದಾರೆ.
©2024 Book Brahma Private Limited.