ರವಿಕುಮಾರ್ ನೀಹ ಅವರ ಖಂಡಕಾವ್ಯ ‘ಜಲ ಜಂಬೂಕನ್ಯೆ’ - ಈ ಕೃತಿಗೆ ಕವಿ, ಲೇಖಕ, ಸಾಂಸ್ಕೃತಿಕ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅವರು ದೀರ್ಘ ಮುನ್ನುಡಿಯನ್ನ ಬರೆದಿದ್ದಾರೆ. ಅವರೇ ಹೇಳುವಂತೆ ‘ಕುಲಮೂಲದ ನೆನಪುಗಳನ್ನು ಅದರ ಪರಂಪರೆಯ ಹಿನ್ನೆಲೆಯಲ್ಲಿ ಮರುಜೋಡಿಸಿಕೊಳ್ಳುತ್ತಾ ಪುರಾಣದಿಂದ ವರ್ತಮಾನಕ್ಕೆ, ವರ್ತಮಾನದಿಂದ ಇತಿಹಾಸಕ್ಕೆ, ಇತಿಹಾಸದಿಂದ ಮತ್ತೆ ವರ್ತಮಾನಕ್ಕೆ ಹರಿದಾಡುವ ಜಲಜಂಬೂಕನ್ನೆ ಕಾವ್ಯವನ್ನು ಡಾ. ರವಿಕುಮಾರ್ ನೀಹ ಬರೆದಿದ್ದಾರೆ. ಸಮುದಾಯ ಕಾವ್ಯ ಎಂಬ ಉಪಶೀರ್ಷಿಕೆಯನ್ನೂ ಇದಕ್ಕೆ ಕೊಟ್ಟಿದ್ದಾರೆ’. ವಿಸ್ಮೃತಿಯ ಆಳಗಳಿಂದ ಎಚ್ಚರದ ಎತ್ತರಗಳನ್ನು ತಲುಪಲಿಕ್ಕೆ ತಳಾದಿ ಸಂಸ್ಕೃತಿಗಳು ಕೈಗೊಂಡಿರುವ ಮಹಾಯಾನಕ್ಕೆ ಇಂಬು ಕೊಡುವ ಒಂದು ಯತ್ನವಾಗಿ ಕುಲಮೂಲದ ಸ್ಮೃತಿಗಳನ್ನು ಹೀಗೆ ಕಾವ್ಯದಲ್ಲಿ ತಂದುಕೊಂಡಿರುವ ಜಲಜಂಬೂಕನ್ನೆ ರೂಪುಗೊಂಡಿದೆಯೆಂದು ನನಗೆ ಅನಿಸುತ್ತದೆ ಎನ್ನುತ್ತಾರೆ ಬಂಜಗೆರೆ ಜಯಪ್ರಕಾಶ್.
ಭರತವರ್ಷದ ಮೂಲ ಹೆಸರುಗಳಲ್ಲಿ ಒಂದಾದ ಜಂಬೂದ್ವೀಪ, ಅದರ ಮೂಲ ಪುರುಷನಾದ ಜಾಂಬವಮುನಿ, ಆತ ತನ್ನ ಮಕ್ಕಳನ್ನೇ ಬಲಿಕೊಟ್ಟು ಭೂಮಿಯನ್ನು ಹೆಪ್ಪುಗಟ್ಟಿಸಿದ ಸಾಹಸದ ಸ್ಮೃತಿ, ಮಹಾಮುನಿ ಮತಂಗ, ಆದಿ ದೇವತೆಯಾದ ಮಾರಮ್ಮ,ಬಸವಣ್ಣ, ಹರಳಯ್ಯ, ಕೋಡಿ ಮಠ, ಕೊಂಕಣಿ ಮಠ ಮುಂತಾದ ಹಲವಾರು ಅಂಶಗಳು ಈ ಕಾವ್ಯಧಾರೆಯಲ್ಲಿ ಹರಿದಿವೆ. ಒಂದು ಸಾಂಸ್ಕೃತಿಕ ಪರಂಪರೆಯ ಹರವು ಎಷ್ಟು ವಿಸ್ತಾರವಾದುದು, ಅದರ ಮೂಲದ ಆಳ ಎಷ್ಟು ಸಾವಿರ ವರ್ಷಗಳದ್ದಿರಬಹುದು ಎಂಬುದರ ಕಾವ್ಯಾತ್ಮಕ ಸೂಚನೆಯನ್ನು ಕೊಡುವ ನಿಟ್ಟಿನಲ್ಲಿ ಜಲಜಂಬೂಕನ್ನೆ ಒಂದು ಮಹತ್ವದ ಪಯತ್ನವನ್ನು ಮಾಡುತ್ತಿದೆ.
©2024 Book Brahma Private Limited.