’ಧರೆಗೆ ದೊಡ್ಡೋರು ಮಂಟೇಸ್ವಾಮಿ ’ ಕೃತಿಯು ಕೇವಲ ಬೆಟ್ಟದ ಬೀಡು ಸಿದ್ಧಶೆಟ್ಟರು ಹಾಡಿದ ಕಾವ್ಯಗಳ ಸಂಗ್ರಹವಲ್ಲ; ಇದೊಂದು ಸಂಶೋಧನಾತ್ಮಕ ಕಾರ್ಯ ಎಂದು ಲೇಖಕ ಪಿ.ಕೆ.ರಾಜಶೇಖರ ಅವರು ಹೇಳುತ್ತಾರೆ.
ಮಂಟೇಸ್ವಾಮಿ ಕಾವ್ಯವು ಗಾತ್ರದಲ್ಲೂ, ಪಾತ್ರದಲ್ಲೂ ನೂತನ ವಿಕ್ರಮವನ್ನು ಸಾಧಿಸಿದೆ. ಎರಡು ಮಹಾಕಾವ್ಯಗಳನ್ನು ಹಾಡಿದ ಕೀರ್ತಿ ಬೆಟ್ಟರಬೀಡು ಸಿದ್ಧಶೆಟ್ಟರಿಗಿದೆ. ಈ ಎರಡೂ ಕಾವ್ಯಗಳನ್ನು ಅಕ್ಷರ ರೂಪಕ್ಕೆ ಇಳಿಸಿಕೊಟ್ಟಿದ್ದು ಲೇಖಕರ ಹೆಗ್ಗಳಿಕೆ. ಏಕೆಂದರೆ, ಮಂಟೇಸ್ವಾಮಿ ಕಾವ್ಯವು ಮೌಖಿಕ ಇತಿಹಾಸಕ್ಕೆ ಸಂಬಂಧಿಸಿದ್ದಾಗಿತ್ತು. ಹೀಗಾಗಿ, ಚರಿತ್ರೆ ಮತ್ತು ಕಲ್ಪನೆ ಎರಡೂ ಇಲ್ಲಿ ಮೇಳೈಸಿವೆ. ಒಂದು ಮಹಾಕಾವ್ಯವನ್ನು ಸಂಗ್ರಹಿಸಿ, ಸಂಪಾದಿಸಿ, ಅಕ್ಷರ ರೂಪ ಕೊಡುವುದು ಸಾಮಾನ್ಯ ಕೆಲಸವೇನಲ್ಲ. ಲೇಖಕರ ಅಪಾರ ಶ್ರಮ, ಅನುಭವ ಹಾಗೂ ಪ್ರತಿಭೆಯನ್ನು ಇಲ್ಲಿ ಕಾಣಬಹುದು.
’ಧರೆಗೆ ದೊಡ್ಡೋರು ಮಂಟೇಸ್ವಾಮಿ’ ಕೃತಿಗೆ ಮೌಖಿಕವಾಗಿ ಹಾಡುತ್ತಾ ಉಳಿಸಿಕೊಂಡು ಬಂದ ಬೆಟ್ಟದ ಬೀಡು ಸಿದ್ಧಶೆಟ್ಟರು ಹಾಗೂ ಅದನ್ನು ಅಕ್ಷರಕ್ಕೆ ಇಳಿಸಿದ ಪಿ.ಕೆ. ರಾಜಶೇಖರ ಅವರಿಬ್ಬರು ಅಭಿನಂದನಾರ್ಹರು. ಏಕೆಂದರೆ, ಮಂಟೇಸ್ವಾಮಿ ಕಾವ್ಯದಲ್ಲಿ ಪುರಾಣ ಎಷ್ಟು, ಇತಿಹಾಸದ ಪಾಲೆಷ್ಟು ಎಂದು ಹೇಳುವಂತಿಲ್ಲ. ಆದರೆ, ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಕೆಲಸ ಕಾರ್ಯದಿಂದಾಗಿ ಹೇಗೆ ಅಸಾಮಾನ್ಯನಾಗಬಲ್ಲ ಎಂಬುದಕ್ಕೆ ಬೆಟ್ಟದಬೀಡು ಸಿದ್ಧಶೆಟ್ಟರು ಮಾದರಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ, ಕಾವ್ಯವು ಐತಿಹಾಸಿಕವಾಗಿದೆ ಎಂದರೂ ಇದನ್ನ”ಇತಿಹಾಸದ ಪುರಾಣೀಕರಣ’ ಎಂದು ವ್ಯಾಖ್ಯಾನಿಸಬಹುದು ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಒಟ್ಟಿನಲ್ಲಿ, ಈ ಕೃತಿಯು ಸಂಶೋಧನಾತ್ಮಕ ಗುಣಲಕ್ಷಣಗಳನ್ನು ಹೊಂದಿದೆ.
©2025 Book Brahma Private Limited.