ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೃಷಿ ಕುಟುಂಬದ ಶ್ರೀ ರಾಮಚಂದ್ರ ಕೋಡಿಬೈಲುರವರ ಪತ್ನಿ ಅಶ್ವಿನಿ ಕೋಡಿಬೈಲುರವರು ನಿವೃತ್ತ ಶಿಕ್ಷಕರಾದ ವಳಂಗಜೆ ಶ್ರೀ ಗೋಪಾಲಕೃಷ್ಣ ಭಟ್ ಮತ್ತು ಶ್ರೀಮತಿ ಶಂಕರಿ ದಂಪತಿಯ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ಕೆದಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಪ್ರೌಢ ಶಿಕ್ಷಣವನ್ನು ಕರ್ನಾಟಕ ಪ್ರೌಢಶಾಲೆ ಮಾಣಿಯಲ್ಲೂ ಪಡೆದ ಇವರು ಪದವಿಪೂರ್ವ ಶಿಕ್ಷಣ ಮತ್ತು ಬಿ.ಎಸ್ಸಿ. ಪದವಿಯನ್ನು ವಿವೇಕಾನಂದ ಮಹಾವಿದ್ಯಾಲಯಲ್ಲಿ ಪಡೆದಿರುತ್ತಾರೆ. ಇವರು ಮೈಸೂರು ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಸಂಸ್ಕೃತದ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಪೂರೈಸಿದ ಪ್ರತಿಭಾವಂತೆ. 'ಸೌಗಂಧಿಕಾ' ಎಂಬ ಕವನ ಸಂಕಲನವನ್ನೂ, ಜನಮನ್ನಣೆ ಗಳಿಸಿದ 'ಶಬರಿಮಲೆ ಸ್ವಾಮಿ ಅಯ್ಯಪ್ಪ' ಎಂಬ ರೂಪಕದ ಕೃತಿಯನ್ನೂ ಸಾರಸ್ವತ ಲೋಕಕ್ಕೆ ಅರ್ಪಿಸಿದ ಇವರು ಇದೀಗ 'ಸೌಪರ್ಣಿಕಾ' ಎಂಬ ಕವನ ಸಂಕಲನದ ಮೂಲಕ ಮೂರನೆಯ ಕೃತಿಯನ್ನು ಅರ್ಪಿಸುತ್ತಿದ್ದಾರೆ. ಇವರ ಹಲವಾರು ಭಾವಗೀತೆಗಳು ಹಾಡಾಗಿ ಕೇಳುಗರನ್ನು ಆಕರ್ಷಿಸಿ ಜನಪ್ರಿಯತೆ ಗಳಿಸುತ್ತಿದ್ದು 'ಬಂದಿ ಏಕಾದೆ ಮನವೇ' ಸುಪ್ರಸಿದ್ಧ ಗೀತೆಗಳಲ್ಲಿ ಮೊದಲನೆಯದು. ಹಲವಾರು ಸಂಘಸಂಸ್ಥೆಗಳು ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಗೌರವಿಸಿದ್ದು 2022ನೇ ಸಾಲಿನಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಸುಳ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇವರಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಬಿ. ಐತ್ತಪ್ಪ ನಾಯ್ಕ್ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.