“....ಪುಟ್ಟ ಪುಟ್ಟ ಸಾಲುಗಳು ಗಹನವಾದ ಏನನ್ನೂ ಹೇಳ ಹೊರಟಿದ್ದಲ್ಲ ಎನ್ನುವ ಭಾವ, ರಾತ್ರಿ ಕತ್ತಲಲ್ಲಿ ಸುರಿವ ಮಳೆಯಲ್ಲಿ ಕೊಡೆ ಹಿಡಿದು ಎಲ್ಲಿಗೋ ಹೊರಟ ಹಾಗಿದೆ. ಈ ಪ್ರಯಾಣ ಅಷ್ಟಿಷ್ಟು ಮಾತು, ಗಾಂವ್ ಎನ್ನುವ ಕಡಲ ಮೊರೆತ, ನೂರಾರು ಬಗೆಯ ಕ್ರಿಮಿ ಕೀಟ, ಕಪ್ಪೆ- ಮತ್ತೊಂದು ಎಬ್ಬಿಸುವ ಹಿನ್ನೆಲೆ ಶಬ್ದ, ಒದ್ದೆಯಾಗಿ ಭಾರವಾದ ಮರಗಿಡಗಳು, ಗಾಂಭೀರ್ಯದ ನಡುವೆ ನಡೆವಾಗ ಏನೋ ಅಸ್ಪಷ್ಟತೆಯೊಂದು ಕಾಡುತ್ತಲೇ ಇರುತ್ತವೆ. ಇದು ರಾಜು ಹೆಗಡೆಯವರ ಕವಿತೆಯ ಧಾಟಿ. ಸರಳ ಎನಿಸಿದ, ಸುಮ್ಮನೆ ಮಾತಾಡಿದ ಹಾಗೆ ಅನಿಸಿದ ಆ ಸಾಲುಗಳ ನಡುವೆ ಒಂದು ಮೌನ ಕದ್ದು ಕೂತಿರುತ್ತದೆ. ಕಾಡುವ ಒಂದು ಮೌನವನ್ನು ಕಾಪಿಟ್ಟುಕೊಡೇ ಬೆಳೆಯುತ್ತವೆ. ರಾಜು ಹೆಗಡೆಯವರು ಎಲ್ಲವನ್ನೂ ತೆರೆತರೆದು ಹೇಳುತ್ತಿರುವಂತೆ ಕಾಣುತ್ತದೆ, ಕಾಣುತ್ತದೆ ಅಷ್ಟೇ. ಆಯ್ತು ಮಾರಾಯಾ ಬಲ್ಲೆಯಾ ಎಂದು ಈತ ಹೊರಟಿದ್ದೇ. ಇಷ್ಟು ಹೊತ್ತೂ ಆಡಿದ್ದರ ಅರ್ಥ ಬರಿಯ ಅಷ್ಟೇ ಆಗಿರಲಿಲ್ಲ ಅನಿಸುತ್ತದೆ. ಕೇಳೋಣ ಎಂದರೆ ಅಲ್ಲಿ ಅವರಿಲ್ಲ....” ನರೇಂದ್ರ ಪೈ ಅವರು ಕೃತಿಯ ಕುರಿತು ಬರೆದಿರುವ ಬೆನ್ನುಡಿ.
ಕವಿತಾ ವಾಚನ#ಸಿಂಧುಚಂದ್ರ# ಕವಿ ರಾಜು ಹೆಗಡೆ
ವಿಶಿಷ್ಟ, ಪ್ರತಿಭಾನ್ವಿತ, ಪ್ರಮುಖ ಕವಿಗಳೇ ತುಂಬಿರುವ ಈ ಜಗತ್ತಿನಲ್ಲಿ ರಾಜು ಹೆಗಡೆ ಸಾಧಾರಣ ಕವಿ. ಅವರ ಕವಿತೆಗಳಲ್ಲಿ ದಾರ್ಶನಿಕತೆಯ ಸೋಗಿಲ್ಲ. ದಿವ್ಯದ ಅನುಭೂತಿಯನ್ನು ದಾಟಿಸುವ ಕ್ರಮವಿದೆಯೇ ಹೊರತು, ಕವಿ ತಾನೇ ದಿವ್ಯವಾಗುವ ಹವಣಿಕೆ ಇಲ್ಲ. ಅವರ ಕವಿತೆಗಳ ಸಿಂಪ್ಲಿಸಿಟಿ ಹೇಗಿರುತ್ತವೆ ಎಂದರೆ – ವಾಕಿಂಗ್ ಹೋಗುವವರು ಕೈಬೀಸಿಕೊಂಡು ಹೋಗುವಂತೆ ಬದುಕಿನ ಹಗಲು ರಾತ್ರಿಗಳು ಉರುಳುತ್ತಿರುತ್ತವೆ, ದುಃಖದ ಸ್ಮಶಾನದಲ್ಲಿ ಇರುವಾಗಲೂ ಇರುವೆ ಕಚ್ಚುತ್ತದೆ, ಮತ್ತು ಮೈ ತುಂಬ ಹೊಳೆಯುವ ಉದ್ದನೆಯ ಜುಬ್ಬಕ್ಕೆ ತನ್ನೊಳಗಿರುವವನಿಗೆ ಜೀವ ಇದೆಯೊ ಇಲ್ಲವೋ ಎನ್ನುವುದು ಗೊತ್ತಿದ್ದಂತಿಲ್ಲ. ರಾಮು ಕವಿತೆಗಳು, ನಕ್ಷತ್ರ ಕವಿತೆಗಳು, ನಕ್ಷತ್ರ ದೇವತೆ ಕವನ ಸಂಕಲನಗಳಿಗೆ ಪ್ರೀತಿಯಿಂದ ಸ್ಪಂದಿಸಿದ ಓದುಗರು, ದೈನಂದಿನದ ಒಳಗೆ ದಿವ್ಯವನ್ನು ಆವಾಹಿಸುವ ರಾಜು ಹೆಗಡೆಯವರ ಕವಿತೆಗಳನ್ನು ಸ್ವೀಕರಿಸುತ್ತಾರೆ ಎನ್ನುವ ನಂಬಿಕೆಯಲ್ಲಿ.
https://ruthumana.com/2022/12/25/kanninalli/
https://www.kendasampige.com/%E0%B2%87%E0%B2%A6%E0%B3%8D%E0%B2%A6%E0%B2%82%E0%B2%A4%E0%B3%86-%E0%B2%87%E0%B2%B0%E0%B3%81%E0%B2%B5-%E0%B2%AA%E0%B2%A6%E0%B3%8D%E0%B2%AF%E0%B2%B8%E0%B2%A6%E0%B3%8D%E0%B2%AF/
©2024 Book Brahma Private Limited.