ಒಂದು ಕಡೆ ನಿರ್ಣಾಮವನ್ನು ಧ್ಯಾನಿಸುತ್ತಾ ಇನ್ನೊಂದು ಕಡೆ ನಿರ್ಮಾಣದ ಕಡೆಗೆ ತುಡಿಯುತ್ತಿರುವ ಸುಮಿತ್ ಮೇತ್ರಿ, ಈ ಸಂಕಲನದ ಕವಿತೆಗಳು ಹೊಸ ಹಾದಿಗಳನ್ನು ತುಳಿಯುತ್ತಿರುವುದು ಸ್ಪಷ್ಟವಾಗಿದೆ. ತನ್ನ ಮೊದಲ ಸಂಕಲನದ ಉಕ್ತಿಕ್ರಮವನ್ನು ಈ ಸಂಕಲನದಲ್ಲಿ ಇನ್ನೂ ವಿಸ್ತರಿಸಿಕೊಂಡಿದ್ದಾನೆ. ಸ್ಪಷ್ಟಗೊಳಿಸಿ ಕೊಂಡಿದ್ದಾನೆ. ಮೇಲುನೋಟಕ್ಕೆ ವಿಷಯಾಂತರದಂತೆ ಒಂದು ಪ್ರತಿಮೆಯಿಂದ ಇನ್ನೊಂದು ಪ್ರತಿಮೆಗೆ, ಒಂದು ಸನ್ನಿವೇಶದಿಂದ ಇನ್ನೊಂದು ಸನ್ನಿವೇಶಕ್ಕೆ ಹಾರುವ ಇವರ ಕವಿತೆಯ ಸಾಲುಗಳು ಆಳದಲ್ಲಿ ಒಂದು ಸುಸಂಬದ್ಧತೆಯನ್ನು ಹೊಂದಿರುವುದು ಸಹೃದಯರು ಗುರುತಿಸಬಲ್ಲರು. ಇಂದಿನ ಬಹುತೇಕ ಕನ್ನಡ ಕಾವ್ಯ ಆತ್ಮವೃತ್ತಾಂತದ ಗುಂಗಿನಲ್ಲಿ ಸಿಲುಕಿದೆ. ಆದರೆ ಇಲ್ಲಿ ಈ ಕವಿಯ ಆತ್ಮವೂ ಜಗತ್ತಿನ ಚಕ್ರತೀರ್ಥದಲ್ಲಿ ಸಿಲುಕಿ ಶಾಂತಿಗೆ ತಹತಹಿಸುವ ಒಂದು ಅಭಿವ್ಯಕ್ತಿ ಕ್ರಮ, ಈ ಒಂದು ಅಭಿವ್ಯಕ್ತಿಯನ್ನು ಮಾಡುವಲ್ಲಿ ಅತ್ಯಂತ ವಿಭಿನ್ನವಾದ ಮತ್ತು ಪರಸ್ಪರ ದೂರವಾದ ವಿವರಗಳನ್ನು ಒಂದು ಚಮತ್ಕಾರದ ಬೆಸುಗೆಯಲ್ಲಿ ತಂದಿರಿಸಲಾಗಿದೆ. ಹೀಗೆ ಈ ಸಂಕಲನ, ನಮ್ಮನ್ನು ಮತ್ತು ಪ್ರಸ್ತುತ ಕನ್ನಡ ಕಾವ್ಯ ಓದುಗ ವಲಯವನ್ನು ಒಂದು ವಿಸ್ಮಯಗಳ ಲೋಕಕ್ಕೆ ಕರೆದೊಯ್ಯುತ್ತದೆ. ಆ ವಿಸ್ಮಯಗಳ ನಡುವೆ ನಮ್ಮೆಲ್ಲರ ಗೊತ್ತು ಗುರಿಗಳನ್ನು ಹುಡುಕುವ ಒಂದು ಸ್ತುತ್ಯ ಪ್ರಯತ್ನ ಇಲ್ಲಿದೆ ಎಂದು ಎಚ್.ಎಸ್. ಶಿವಪ್ರಕಾಶ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.