ಲೆಕ್ಕಕೆ ಸಿಗದವರು ರಶ್ಮಿ ಹೆಗಡೆ ಅವರ ಕೃತಿಯಾಗಿದೆ. ರಶ್ಮಿ, ಅಕ್ಕಮಹಾದೇವಿಯ ಜೊತೆ ನಡೆಸುವ ಸಂವಾದ ಜೀವನ್ಮುಖಿಯಾಗಿದೆಯಷ್ಟೇ ಅಲ್ಲ ಅಕ್ಕನ ಕುರಿತ ಈವರೆಗಿನ ಏಕತಾನತೆಯನ್ನು ಮುರಿಯುವಂತಿದೆ. ನಿಜಕ್ಕೂ ನಿನ್ನ ಕಾಡಿದ್ದು, ನೀ ಬೇಡಿದ್ದು ಅವರೊಬ್ಬರೇನೆ? ನಿಜ ಹೇಳು ಮುಟ್ಟು ಮೈಲಿಗೆ ಬಸಿರು ಬಾಣಂತನ ಕಾಡಲಿಲ್ಲವೇ ನಿನ್ನ?- ನಿಜದ ಅರ್ಜುನರ ರಗಳೆ ದಾಟಲಿಕ್ಕೆ ಈ 'ಚೆನ್ನ'ನೆ೦ಬೊ ಅರ್ಜುನ ನೀ ತಬ್ಬಿದ ದೋಣಿ ಮಾತ್ರವೇ?'- ಇಂಥ ಕುತೂಹಲದ ಎದೆಗಾರಿಕೆಯ ಕವಿಯತ್ರಿಯ ಕಕ್ಕುಲಾತಿಯೇ 'ನನ್ನ ಮಗುವಿನ ಮೊದಲ ಸ್ನಾನ ಮಾಡಿಸಿದ ಸಿಸ್ಟರು ಯಾರಾಕೆ?' ಎಂದು ಹುಡುಕುವಂತೆ ಮಾಡಿದೆ. ತಂತಮ್ಮ ತಾಯ್ತನದ ಹಸಿ ಕ್ಷಣಗಳನ್ನು ಇನ್ನೊಮ್ಮೆ ಆವಾಹಿಸಿಕೊಳ್ಳಲು ಬರುವ ತಾಯಂದಿರನ್ನು ಕಂಡು ಒಳಗೊಳಗೇ ನಗುವಂತೆಯೂ, ಕವಿತೆಯೊಂದರಲ್ಲಿ ಸಾಧ್ಯವಾಗಿದೆ. 'ಏಲಕ್ಕಿ'ಯ ಹೊಸ ಪ್ರತಿಮೆಯಲ್ಲಿ ಹೆಣ್ಣಿನ ಇರವು ಕಾಯುತ್ತಾ 'ಒಳಗಿನ ಸದ್ದುಗಳು ಕಾಲನೆದುರು ಶೀಲ ಕಳೆದುಕೊಳ್ಳದಿರಲಿ ಎಂಬ ಎಚ್ಚರವಿಟ್ಟುಕೊಳ್ಳುವ ಕವಿಯು 'ಆಬಾ ಗಂಡಸಿನ ಪ್ರೀತಿಯೇ! ಈ ಪ್ರಪಂಚದಲ್ಲಿ ಪ್ರೀತಿಸಲು ಚಂದಿರ ಮುಳುಗುವ ಮುಂಚೆ ಹೆಣ್ಣುಗಳಿಗೂ ಏನಾದ್ರೂ ಒಂಚೂರು ಉಳಿಸ್ರಪ್ಪ': ಎಂಬ ಅನುನಯಿಸುವಿಕೆಯಲ್ಲೇ ಅನುಮಾನದ ವಿವೇಕವನ್ನೂ ತೋರಿದ್ದಾರೆ. ಎಲ್ಲ ಭಾವುಕ ಸಹಟ ಸುಮ್ಮಾನಗಳ ಜೊತೆ ಇಂಥ ಲವಲವಿಕೆ, ಹೊಸಮಾತು, ಆಪ್ತ ಚಿತ್ರಗಳಲ್ಲಿ ಗೆಲ್ಲುವ ರಶ್ಮಿ, 'ಸುಮ್ಮನೆ' ಆಗುತ್ತಿರಬೇಕು ಕವಿತೆ' ಎಂದು ನಂಬಿಕೊಂಡು ನಿರಾಳವಾಗಿರುವ ಕಾಲ ಹೋಯಿತು ಎಂಬುದನ್ನು ಈ ಸಂಕಲನದ ಕವಿತೆಗಳೇ ಒತ್ತಿ ಒತ್ತಿ ಹೇಳುತ್ತಿದೆ. ಜೆ.ಕೆ ರವೀಂದ್ರ ಕುಮಾರ್.
©2025 Book Brahma Private Limited.