ಇಲ್ಲಿನ ಕವಿತೆಗಳಲ್ಲಿ ಕವಿಯ ಲೋಕಾನುಭವದ ಕಥನಗಳ ಸಂವಾದವಿದೆ, ತನ್ನ ಸುತ್ತಲ ಲೋಕದ ಓದನ್ನು ಧ್ಯಾನವಾಗಿಸಿದ ಕವಿ ಇಲ್ಲಿ ಅಕ್ಷರವಾಗಿದ್ದಾರೆ. ಗಾಲಿಬ್‌ನ ಸಾಮರಸ್ಯದ ಹಂಬಲಗಳು; ಪಣಿರರ ಅವಿಶ್ರಾಂತ ಓದಿನ ಚಿಂತನಶೀಲ ತುಡಿತಗಳು, ಮುರುಗನ್‌ರ ಪ್ರತಿರೋಧದ ನಿಟ್ಟುಸಿರು; ಡೆಸ್ಲಿಮೋನಾಳ ಕರವಸ್ತ್ರದಲ್ಲಡಗಿರುವ ಹೆಣ್ಣಿನ ಸಂಕಟಗಳು; ಬೀದಿ ಬದಿಯ ಹರಳಯ್ಯರ ಉರಿಚಮ್ಮಾವುಗೆಯಲ್ಲಿ ಗಾಯಗೊಂಡ ಚರಿತ್ರೆಗಳು; ಜಂಗಮ ಜೈನ ಮುನಿಯ ದಣಿವರಿಯದ ಪಯಣದ ಹೆಜ್ಜೆ ಗುರುತುಗಳು; ಶೋಕಗೀತೆಯಲ್ಲಿ ಕವಿ ಮಿತ್ರನ ಅಗಣಿತ ತುಮುಲಗಳು; ನೋವಿನ ನಿಗೂಢತೆಯ ಸಂಕೇತವಾದ ಶಾಣಮ್ಮ, ಮಾಸ್ತಿಕಲ್ಲು, ನದಿ, ಸಮುದ್ರ, ಹಕ್ಕಿ, ಗೂಡು, ಜೈಲು, ದುಂಬಿ, ಚಿಟ್ಟೆ, ಜೇನು, ಶಬ್ದ, ಕನಸು ಇತ್ಯಾದಿಗಳು ಇಲ್ಲಿ ಕಾವ್ಯವಾಗಿವೆ. ಮನುಷ್ಯ ಲೋಕದ ಅಂತರಂಗದ ಮೌನಕ್ಕೆ ಮಾತಾಗಲು ಬಯಸುವ ಇಲ್ಲಿನ ಕವಿತೆಗಳಿಗೆ ಮುಖವಾಡತನವನ್ನು ಕಳಚುತ್ತಲೇ ಲೋಕದ ಸುಳ್ಳು-ಸತ್ಯಗಳನ್ನು ಬಯಲಾಗಿಸುವ ಕಣೋಟವಿದೆ. ರಾತ್ರಿ, ಹಗಲುಗಳ ನಿಸರ್ಗವು ಇಲ್ಲಿ ಮತ್ತೆ ಮತ್ತೆ ಸಂವಾದಕ್ಕಿಳಿಯುತ್ತಲೇ ಕಾವ್ಯದ ನಿಜದ ನೆಲೆಯನ್ನು ಸಾಕಾರಗೊಳಿಸಲು ತವಕಿಸುತ್ತದೆ. ಕಾವ್ಯ ಕಟ್ಟುತ್ತಲೇ ಕಾವ್ಯಕಾರಣವನ್ನು ಹುಡುಕುವ ಕವಿಯ ಕಾವ್ಯಶೋಧನೆಯ ಪರಿ ವಿಸ್ಮಯ ಉಂಟುಮಡುತ್ತದೆ ಎಂದು ಡಾ. ಅಪ್ಪಗೆರೆ ಸೋಮಶೇಖರ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.