ಕವಿತೆಯನ್ನು ಹಚ್ಚಿಕೊಂಡು ಓದಿದರೆ ಅದು ನಮ್ಮನ್ನು ಹಚ್ಚಿಕೊಂಡು ಬಿಡುತ್ತದೆಯಂತೆ. ಸುರೇಶ ಅವರ ಕವನಗಳನ್ನು ಓದುತ್ತಾ ಹೋದಾಗ ಅಲ್ಲಿನ ಕೆಲವೊಂದಿಷ್ಟು ಸಾಲುಗಳು ಹಚ್ಚಿಕೊಂಡದ್ದು ಹೌದು. ಇಲ್ಲಿನ ಕವನಗಳು ಸಾಮಾಜಿಕ ನೆಲೆಯಲ್ಲಿ ರೂಪುಗೊಂಡಿರುವಂತಹದ್ದು. ವರ್ತಮಾನದ ವಾಸ್ತವದ ಜೊತೆ ಜೊತೆಗೆ ಸಾಮಾಜಿಕ ಬದಲಾವಣೆಯನ್ನು ನಿರೀಕ್ಷಿಸುವ ಕವಿತೆಗಳು ಇಲ್ಲವೆ. ಸಾರ್ವಜನಿಕ ಸಂಗತಿಗಳಿಗೆ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ಕಾರಣಗಳನ್ನು ಹುಡುಕುವ ಬಹುತೇಕ ಕವನಗಳು ಈ ಸಂಕಲನದ ಜೀವಾಳವಾಗಿವೆ. ಜೀವಂತ ವಲಯದ ಭಾವ ಸಂದರ್ಭಗಳನ್ನು ಅದರ ಗೇಯತೆಯನ್ನು ಇಟ್ಟುಕೊಂಡ ವ್ಯಕ್ತಿ ಪರಿಚಯದ ಕವನಗಳನ್ನು ಕೂಡ ಇಲ್ಲಿ ಕಾಣಬಹುದು. ಜಗದ ಸೌಂದರ್ಯ ಭಾವಕನ್ಯೆ ಮುಂತಾದ ಕವನಗಳು ಪ್ರಾಸಬದ್ಧ ನುಡಿಗಳಿಂದ ಹಾಡಲು ಅನುಕೂಲಿಸುವ ಕವನಗಳು. ಅವರ ಕವಿತಗಳು ನಿಗೂಢತೆಯ ಹಂಗು ತೊರೆದು ನೇರ ಮಾತಾಡುವ ಕವಿತೆಗಳು. ಚಿಂತನಶೀಲತೆಗಳನ್ನು ಪರಿಣಾಮಕಾರಿಯಾಗಿ ಸಮರ್ಥವಾಗಿ ಬಿಂಬಿಸುವವು. ಈ ಸಂಕಲನದ ಕವಿತೆಗಳು ಹೆಚ್ಚಿನದೇನೂ ಕೇಳುವುದಿಲ್ಲ. ಬಹುಶಃ ಈ ಕಾರಣದಿಂದ ವಾಚಾಳಿ ಎನಿಸುವುದಿಲ್ಲ. ತಮಗನಿಸಿದ್ದು ಸ್ವಲ್ಪದರಲ್ಲಿಯೇ ಹೇಳಿಬಿಡುತ್ತವೆ. ಬಹು ನಿರೀಕ್ಷೆಯನ್ನು ಹೊಂದಿಲ್ಲದಿದ್ದರೂ ಕಾವ್ಯ ಬರೆಯುವಂತಹ ಸೃಜನಶೀಲತೆಗಳನ್ನು ಹೊತ್ತಿವೆ. ಸಮಾಜದ ಚಲನೆಯ ಬಗ್ಗೆ ಬದಲಾವಣಿಗಳ ಬಗ್ಗೆ ಏಸು ನುಡಿವ ಮಾತುಗಳವೆ. ಆತ್ಮಸಂಗಾತದ ವಿಷಾದದ ದನಿಗಳು ಇರುವುದರಿಂದಲೇ ನಾವೆಲ್ಲ ಒಂದಾದರೆ ಬಿಳಿಯ ಬಣ್ಣವಾಗುವ ಮಹದಾಸೆಯನ್ನು ಹೊತ್ತ ಸಾಲು ನಮ್ಮನ್ನು ಬಿಡದೆ ಹಚ್ಚಿಕೊಳ್ಳುತ್ತದೆ.
©2024 Book Brahma Private Limited.