ಶ್ರೀ ಸಿ.ಎಂ.ಗೋವಿಂದರೆಡ್ಡಿಯವರ ‘ಪದ್ಯ ಹೇಳುವ ಮರ’ ದಲ್ಲಿರುವ ಮಕ್ಕಳ ಪದ್ಯಗಳನ್ನು ಒಂದೊಂದಾಗಿ ಓದುತ್ತಾ ಹೋಗುವಾಗ ಥಟ್ಟನೆ ನೆನಪಾದದ್ದು, ಕವಿ ಗೆಳೆಯ ಲಕ್ಕೂರು ಆನಂದ ಅವರ ಕವಿತೆಯ ಸಾಲು- “ಕವಿತೆಯನ್ನು ನಾನು ಎಷ್ಟು ಪ್ರೀತಿಸುತ್ತಿದ್ದೇನೆಂದರೆ, ಬೇರೆ ಇನ್ನಾವುದನ್ನಾದರೂ ದ್ವೇಷಿಸೋಣವೆಂದರೆ ನನ್ನ ಗುಂಡಿಗೆಯಲ್ಲಿ ಜಾಗವೇ ಇಲ್ಲದಷ್ಟು”. ಇದಕ್ಕೆ ಬಲು ಮುಖ್ಯ ಕಾರಣ ಈ ಮಕ್ಕಳ ಸಂಕಲನದ ಕವಿ ರೆಡ್ಡಿಯವರು, ಮಕ್ಕಳನ್ನು ತನಗಿಂತ ಬುದ್ಧಿವಂತರೆಂದು ಪ್ರಾಮಾಣಿಕವಾಗಿ ಒಪ್ಪಿಕೊಂಡು, ಯಾವುದೇ ಬಗೆಯ [ವಾಚ್ಯ] ಉಪದೇಶವನ್ನು ನೀಡದೆ, ಮಕ್ಕಳೆಲ್ಲ ಪ್ರೀತಿಸಬಲ್ಲ ಮುದ್ದು ಮುದ್ದಾದ ಪದ್ಯಗಳನ್ನು ಬರೆಯುತ್ತಿರುವುದು. ಅದೆಷ್ಟೇ ಒಳ್ಳೆಯ ಮಕ್ಕಳ ಪದ್ಯಗಳನ್ನು ಓದಿದಾಗಲೂ ಪಂಜೆ, ರಾಜರತ್ನಂ, ಹೊಯಿಸಳ, ಮಚ್ಚಿಮಲೆ, ಲಕ್ಷ್ಮಣ ಪೈ, ಕಾರಂತ ಮೊದಲಾದ ಹಿರಿಯರು ಬೇಡ ಬೇಡವೆಂದರೂ ನೆನಪಾಗುತ್ತಾರೆ. ಆದರೆ ಈ ನೆನಪುಗಳಲ್ಲಿ ಎರಡು ಬಗೆಯವು ಇವೆ. ಕೆಲವು ಪದ್ಯಗಳನ್ನು ಓದುವಾಗ ‘ಇದು’ ಅದರ ‘ಪ್ರತಿ’ಯಲ್ಲವೇ ಎಂಬ ಕಾರಣಕ್ಕೆ ಆ ಹಿರಿಯರು ನೆನಪಾದರೆ, ಹಲವು ಪದ್ಯಗಳನ್ನು ಓದುವಾಗ ‘ಇದು ಅದಕ್ಕಿಂತ ಒಳ್ಳೆಯದಿದೆ’ ಎಂಬ ಕಾರಣಕ್ಕೆ ನೆನಪಾಗುತ್ತಾರೆ. ಈ ‘ಪದ್ಯ ಹೇಳುವ ಮರ’ದಲ್ಲಿರುವ ಬಹಳಷ್ಟು ಪದ್ಯಗಳು ‘ಇದು ಅದಕ್ಕಿಂತ ಒಳ್ಳೆಯದಿದೆ’ ಎಂಬ ಕಾರಣಕ್ಕೆ ಅವರೆಲ್ಲರನ್ನೂ ಮತ್ತೊಮ್ಮೆ ನೆನಪಿಸುತ್ತವೆ. ಸಂಕಲನದ ಪದ್ಯಗಳನ್ನು ಒಂದೊಂದಾಗಿ ಉದಾಹರಿಸುತ್ತಾ ಇದು ಯಾಕೆ ಚೆನ್ನಾಗಿದೆ, ಅದು ಯಾಕೆ ಚೆನ್ನಾಗಿಲ್ಲ ಎಂದು ಬರೆದರೆ ಅದು ಮುನ್ನುಡಿಯಾಗದೆ ವಿಮರ್ಶೆಯಾಗಿಬಿಡಬಹುದು. ಮಕ್ಕಳ ಪದ್ಯಗಳನ್ನು ಚೆನ್ನಾಗಿದೆ ಅಥವಾ ಇಲ್ಲ ಎಂಬುದನ್ನು ದೊಡ್ಡವರಿಗಿಂತ ಮಕ್ಕಳೇ ಹೆಚ್ಚು ಚೆನ್ನಾಗಿ ಹೇಳಬಲ್ಲರು. ನನಗೆ ತಿಳಿದ ತಕ್ಕಡಿಯಲ್ಲಿ ಅಳೆದು ನೋಡಿದರೂ ಪ್ರಸ್ತುತ ಸಂಕಲನದಲ್ಲಿ ಮಕ್ಕಳು ಮೊದಲ ಓದಿನಲ್ಲೇ ಪ್ರೀತಿಸಬಹುದಾದ ಬಹಳಷ್ಟು ಒಳ್ಳೆಯ ಪದ್ಯಗಳಿವೆ. ದೊಡ್ಡವರ ಆಸೆಗಳಾಗಿರುವ ನಾಡು ನುಡಿ, ದೇಶಪ್ರೇಮಗಳಿಗಿಂತ ಅವರ ಕಣ್ಣಿಗೆ ಕಾಣಿಸುವ ಸೂರ್ಯ, ಚಂದ್ರ, ನಕ್ಷತ್ರಗಳು; ನೆಲ ಜಲ ಆಕಾಶಗಳು; ಕಾಗೆ, ಕೋಗಿಲೆ, ಗಿಳಿಗಳು ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತವೆ ಎಂಬ ಸತ್ಯ ರೆಡ್ಡಿಯವರಿಗೆ ಬಹಳ ಚೆನ್ನಾಗಿ ಗೊತ್ತಿರುವಂತಿದೆ. ‘ನಾಯಿ ಮರಿ’, ‘ನಾಗರಹಾವು’, ‘ಮಂಗಗಳ ಉಪವಾಸ’, ‘ಅಜ್ಜನ ಕೋಲು’ಗಳು ಯಾರಿಗಾದರೂ ಇಂದು ಕೂಡಾ ಮತ್ತೆ ಮತ್ತೆ ನೆನಪಾಗುತ್ತಿರುವುದಾದರೆ ಅದಕ್ಕೆ ಕಾರಣ, ಆ ಪದ್ಯಗಳ ವಸ್ತು, ನಿರೂಪಣೆಗೆ ಬಳಸಿದ ಭಾಷೆ ಮತ್ತು ಪದ ಲಯ-ವಿನ್ಯಾಸಗಳು. ಈ ಸಂಕಲನದ ಬಹುಪಾಲು ಪದ್ಯಗಳು ಆ ಬಗೆಯ ಪದ್ಯಗಳಿಗೆ ಉತ್ತಮ ಉದಾಹರಣೆಗಳಾಗಿ ನಿಲ್ಲುತ್ತವೆ. ಇವೆಲ್ಲವುಗಳ ನಡುವೆ ಅಪರೂಪದ ಎರಡು ಪದ್ಯಗಳನ್ನು ಹೆಸರಿಸಲೇಬೇಕಾಗಿದೆ. ಅವೆರಡೂ ಈಗಾಗಲೇ ಜನಪ್ರಿಯವಾಗಿರುವ ನಮ್ಮ ಸಂಸ್ಕೃತಿಯ ಭಾಗವೇ ಆಗಿರುವ ಪೌರಾಣಿಕ ಕಥಾವಸ್ತುಗಳನ್ನೊಳಗೊಂಡ ಪದ್ಯಗಳು. ಈ ಸಂಕಲನದ ಸುಮಾರು ಇಪ್ಪತ್ತೈದಕ್ಕೂ ಮಿಕ್ಕಿದ ಪುಟಗಳನ್ನು ಆವರಿಸಿಕೊಂಡಿರುವ ‘ರಾಮಧಾನ್ಯ’ ಮತ್ತು ‘ಭೀಮನ ಮದುವೆ’ ಎಂಬೆರಡು ಪದ್ಯಗಳನ್ನು ಪುಟ್ಟ ಪುಟ್ಟ ಮಕ್ಕಳೆದುರು ದೊಡ್ಡವರು ಗಟ್ಟಿಯಾಗಿ ಹಾಡುತ್ತಾ ‘ಸಂದರ್ಭ ಸಹಿತ ವಿವರಿಸಿದರೆ’, ಮಕ್ಕಳು ಖಂಡಿತವಾಗಿ ಸಂತೋಷಪಡುತ್ತಾರೆ. ಮಕ್ಕಳ ಪದ್ಯಗಳ ಉದ್ದೇಶವೂ ಇದುವೆ; ಮಕ್ಕಳನ್ನು ಸಂತೋಷಪಡಿಸುವುದು ಮತ್ತು ಆ ಮೂಲಕ ಮಕ್ಕಳು ತಾವಾಗಿಯೇ ಮತ್ತಷ್ಟು ಪದ್ಯಗಳನ್ನು ಓದಿ ಸಂತೋಷಪಡುವಂತೆ ಮಾಡುವುದು. ಪ್ರಸ್ತುತ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಅಂಕಲ್’ ಕಾಲದಲ್ಲಿ ಕನ್ನಡದಲ್ಲಿ ಮುದ್ರಣವಾಗುತ್ತಿರುವ ಯಾವುದೇ ಬರಹವನ್ನಾದರೂ ಅದು ಕತೆ, ಕಾದಂಬರಿ, ನಾಟಕ, ವಿಮರ್ಶೆ ಯಾವುದೇ ಆಗಿದ್ದರೂ ಓದುವವರಲ್ಲಿ ಹೆಚ್ಚಿನವರು ಬಡ ಕನ್ನಡಿಗರ, ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು. ಇನ್ನೊಂದು ಹತ್ತು ಹದಿನೈದು ವರ್ಷಗಳ ಆನಂತರದಲ್ಲಿ ಉಳಿಯುವ ಕನ್ನಡದ ಓದುಗರೂ ಇವರೇ. ಆದ್ದರಿಂದ, ನನ್ನಂತಹ ಎಲ್ಲ ಲೇಖಕರ ಕನ್ನಡ ಭಾಷೆಯ ಬರಹಗಳಿಗೆ ಓದುಗರನ್ನು ತಯಾರು ಮಾಡುತ್ತಿರುವ ಶ್ರೀ ಸಿ.ಎಂ.ಗೋವಿಂದರೆಡ್ಡಿಯವರಂತಹ ಮಕ್ಕಳ ಸಾಹಿತಿಗಳಿಗೆ, ಕನ್ನಡದ ಎಲ್ಲ ಬರಹಗಾರರೂ ಕೃತಜ್ಞರಾಗಿರಬೇಕು. ಬೆಂಗಳೂರು ಬೊಳುವಾರು ಮಹಮದ್ ಕುಂಞಿ ಜೂನ್ ೧೦, ೨೦೧೧
ಚಂದ್ರಗ್ರಹಣ ಮೂಡಿದ ಚಂದ್ರಮ ಮೂಡಣ ಬಾನಲಿ ಬೆಳ್ಳಿಯ ಕಾಂತಿಯ ಚೆಲ್ಲುತಲಿ ನೀಲಿಯ ಬಾನಲಿ ತೇಲುತ ಸುಂದರ ಏರುತಲಿದ್ದನು ಹರುಷದಲಿ ಹುಣ್ಣಿಮೆ ಚಂದ್ರನ ಹಾಲಿನ ಬೆಳಕಲಿ ನೈದಿಲೆ ಅರಳಿತು ನಲಿಯುತಲಿ ತಣ್ಣನೆ ಗಾಳಿಯು ಬೀಸುತಲಿರಲು ಹರಡಿತು ಪರಿಮಳ ಹರುಷದಲಿ ಊರಿನ ಚಿಣ್ಣರು ಗೆಳೆಯರ ಕೂಡಿ ಆಡಲು ಹೊರಟರು ಕುಣಿಯುತಲಿ ಪುಟ್ಟುವು ಅಪ್ಪನ ಜೊತೆಯಲಿ ತಾನೂ ಕುಳಿತನು ಹರಟೆಯ ಹೊಡೆಯುತಲಿ “ಅಪ್ಪಾ, ಏನದು ಚಂದ್ರನ ಮೇಲೆ ಜಿಂಕೆಯ ಹಾಗೆ ಕುಳಿತಿಹುದು?” “ಜಿಂಕೆಯಲ್ಲ ಮರಿ ಹಳ್ಳ ಕಂದಕವು ಕಪ್ಪನೆ ಕಲೆಯಲಿ ಕಾಣುವುದು” ಸುಂದರ ಚಂದಿರ ಕರಗುತ ನಡೆದನು ತನ್ನಯ ಹೊಳಪನು ಕಳೆಯುತಲಿ ಹೊಳೆಯುವ ಚಂದ್ರನು ಕಾಣದೆ ಹೋದನು ಮುಂದಿನ ಕೆಲವೇ ನಿಮಿಷದಲಿ ! ಕೇಳಿದ ಪುಟ್ಟು-“ಏನದು ಅಪ್ಪಾ ಚಂದ್ರನ ಕೇತುವು ನುಂಗಿದನೆ?” ಚಂದ್ರನಿಗಿನ್ನು ಬಿಡುಗಡೆ ಎಂತೋ ಎನ್ನುತ ಚಿಂತೆಯ ಮಾಡಿದನು! ಅಪ್ಪನು ಹೇಳಿದ-“ಮೂಡನಂಬಿಕೆಯು ಬೆಳೆಸಿದೆ ಮನಸಿನ ಅಜ್ಞಾನ ನಿಜವನು ಅರಿತು ಅರಿವನು ಪಡೆದರೆ ತಿಳಿವುದು ಸತ್ಯದ ವಿಜ್ಞಾನ ಭೂಮಿಯು ಸೂರ್ಯನ ಚಂದ್ರನು ಭೂಮಿಯ ಸುತ್ತುತಲಿರುವುವು ಹಗಲಿರುಳು ಸೂರ್ಯನ ಬೆಳಕನೆ ಚಂದ್ರನು ಪಡೆದು ನೀಡುವ ಭೂಮಿಗೆ ಬೆಳದಿಂಗಳು ಸೂರ್ಯ-ಚಂದ್ರರ ನಡುವಲಿ ಭೂಮಿಯು ಬಂದಂತಹ ಆ ಸಮಯದಲಿ ಸೂರ್ಯನ ಬೆಳಕು ಚಂದ್ರಗೆ ದೊರಕದೆ ಎಲ್ಲರ ಕಣ್ಮರೆಯಾಗುವನು ತಿಳಿಯದ ಮೂಢರು ನುಡಿವರು ಇದನ್ನು ಕೇತುವು ನುಂಗಿದ ಚಂದ್ರಮನ ಕರೆವರು ತಿಳಿದವರಿಂತಹ ಸಮಯವ ಹಿಡಿದಿದೆ ಚಂದ್ರನಿಗೆ ಗ್ರಹಣ ಭೂಮಿಯು ಪಕ್ಕಕೆ ಸರಿಯುತ ಸಾಗಲು ಫಳಫಳ ಚಂದ್ರನು ಹೊಳೆಯುವನು ಸತ್ಯವ ತಿಳಿಸುತ ಮಕ್ಕಳ ಮನಸಿನ ಕತ್ತಲ ಕೊಳೆಯನು ತೊಳೆಯುವನು” ಸತ್ಯವನರಿತ ಪುಟ್ಟನ ಮನಸಿಗೆ ಹೆಚ್ಚಿನ ಸಂತಸವಾಗಿತ್ತು ಸತ್ಯವ ಹೇಳುವ ವಿಜ್ಞಾನವನು ಎಂದಿಗೂ ನಂಬುವೆನೆಂದಿತ್ತು ( ೧೯೯೨ ರ ಪ್ರಜಾವಾಣಿ ದೀಪಾವಳಿ ಶಿಶುಕಾವ್ಯಸ್ಪರ್ಧೆಯಲ್ಲಿ ಬಹುಮಾನ ಪಡೆದ ಕವಿತೆ )
©2024 Book Brahma Private Limited.