ಕಂಬನಿ ಕಂಡ ಕನಸು ಗದ್ದೆಪ್ಪ ಬಿ. ಗುತ್ತೇದಾರ ಅವರ ಕವನಸಂಕಲನವಾಗಿದೆ. ಕಾವ್ಯಕ್ಕೆ ಛಂದಸ್ಸು ಅನಿವಾರ್ಯವಲ್ಲದಿದ್ದರೂ ಅಪೇಕ್ಷಣೀಯ, ರಸ, ಲಯ, ಧ್ವನಿ, ಯತಿ, ಪ್ರಾಸ, ರೀತಿ, ಛಂದಸ್ಸಿನಲ್ಲಿರಬೇಕಾದ ಪ್ರಮುಖ ಅಂಶಗಳು. ಕಾವ್ಯವು ಛಂದೋಬದ್ಧವಾಗಿದ್ದರೆ ಓದುಗನನ್ನು ಮತ್ತಷ್ಟು ಆಕರ್ಷಿಸುತ್ತವೆ ಎಂಬುದು ಮನದಿಂಗಿತ. ಜಗತ್ತು ಆಧುನೀಕರಣಗೊಂಡಂತೆ ಕಾವ್ಯವೂ ಸಹ ಹೊಸ ವಿಧಾನಕ್ಕೆ ಒಡ್ಡಿಕೊಳ್ಳುತ್ತದೆ. ಕಾವ್ಯವನ್ನು ಹೀಗೆ ಬರೆಯಬೇಕೆಂಬ ಸ್ಪಷ್ಟ ಪರಿಕಲ್ಪನೆಯಿಲ್ಲದಿದ್ದರೂ ಕೆಲವು ಪ್ರಕಾರಗಳಿವೆ, ಕೆಲವು ಮಾನದಂಡಗಳಿವೆ. ಕಾವ್ಯದ ಕುರಿತಂತೆ ವಿಶ್ವದ ಶ್ರೇಷ್ಠ ಕವಿಗಳಾದ ವರ್ಡವರ್ತ, ಜಾನ್ಸನ್, ಷೆಲ್ವಿ, ಲೇ ಹಂಚ್, ಮ್ಯಾಥ್ ಅರ್ನಾಲ್ಡ್, ಜಾರ್ಜ ಎಲಿಯಟ್, ರಸ್ಮಿನ್, ಠಾಗೂರ, ಕುವೆಂಪು, ಬೇಂದ್ರೆ, ಬ್ರಾಡ್ಡೆಯಂತವರು ತಮ್ಮದೆ ವ್ಯಾಖ್ಯಾನ ನೀಡಿದ್ದಾರೆ. ಕವಿಯಾದವನು ತನ್ನಲ್ಲಿರುವ ಸೂಪ್ತ ಪ್ರತಿಭೆಯಿಂದ ಹೊಸ ಹೊಸ ಭಾವಗಳನ್ನು, ಅರ್ಥಗಳನ್ನು ಸೃಷ್ಟಿಸಬಲ್ಲನು. ಹಾಗಾಗಿ ಕಾವ್ಯವನ್ನು ಮೋಡಿ, ಚೈತನ್ಯ, ರಮ್ಯತೆ, ಸೊಗಸು, ಸ್ವಾರಸ್ಯ- ರಮಣೀಯವೆನ್ನಬಹುದು. ಕಾವ್ಯವು ಭಾವನೆಗಳನ್ನು ಅಂತರ್ಗತ ಮಾಡಿಕೊಂಡು ತನ್ನನ್ನು ತಾನೇ ಚರ್ಚೆಗೆ ಒಡ್ಡಿಕೊಳ್ಳುತ್ತದೆ. ಕಾವ್ಯವು ಹೇಗೆ ಹುಟ್ಟಿತು ಎಂಬುದನ್ನು ಕವಿಯೂ ಸಹ ಸ್ಪಷ್ಟವಾಗಿ ಹೇಳಲಾರ, ಒಳ್ಳೆಯ ಕವಿತೆಗಳು ಓದುಗನನ್ನು ಅನುಸಂಧಾನಗೊಳಿಸಿ, ಒಳಗಣ್ಣನ್ನು ತೆರೆಯುತ್ತವೆ. ಅನೇಕರು ಕಾವ್ಯ ಕಟ್ಟುವುದಲ್ಲ ಹುಟ್ಟುವುದೆಂದು ವ್ಯಾಖ್ಯಾನಿಸುತ್ತಾರೆ. ಕೆಲವು ಹಿರಿಯರು ಹುಟ್ಟುವುದು ಹಾಗೂ ಕಟ್ಟುವದು ಎರಡೂ ಸಹ ಸಾಧ್ಯವೆಂದು ನಮ್ರತೆಯಿಂದ ಒಪ್ಪಿಕೊಳ್ಳುತ್ತಾರೆ. ಪ್ರಿಯ ಮಿತ್ರ ಗದ್ದೆಪ್ಪ ಗುತ್ತೇದಾರರ ಕವನಗಳಲ್ಲಿ ಕಾವ್ಯದ ಅಂಶಗಳನ್ನು ಪ್ರಮುಖವಾಗಿ ಗಮನಿಸಬಹುದು. ಗದ್ದೆಪ್ಪ ಗುತ್ತೇದಾರರ ಕವಿತೆಗಳು ಸಾಮಾಜಿಕ ಸಮಷ್ಟಿ ಪ್ರಜ್ಞೆಯನ್ನಿಟ್ಟುಕೊಂಡು ರಚಿತವಾಗಿವೆ. ಕೆಲವು ಕವಿತೆಗಳು ಕೌಟುಂಬಿಕ ಸಂಬಂಧಗಳನ್ನು ಘನಗೊಳಿಸಿದರೆ ಇನ್ನೂ ಕೆಲವು ದೇಶಾಭಿಮಾನ ಮೂಡಿಸುತ್ತವೆ. ಯುವ ಸಾಹಿತಿಯಾದ್ದರಿಂದ ಪ್ರೀತಿ, ಪ್ರೇಮಕ್ಕೆ ಸಂಬಂಧಿಸಿದ ಕವಿತೆಗಳೂ ಸಹ ವಯೋಸಹಜವಾಗಿ ಮೂಡಿವೆ. ಇವರ ಕವನಗಳಲ್ಲಿ ಗ್ರಾಮ್ಯ ಸೊಗಡು ಮೇಳೆಸಿವೆ. ಬಹುತೇಕ ಕವನಗಳು ನವೀನ ವಿಚಾರಗಳೊಂದಿಗೆ ವಿಭಿನ್ನ ಶೈಲಿಯಲ್ಲಿ ಮೂಡಿಬಂದಿವೆ. ಕೆಲವೆಡೆ ವಾಚ್ಯವೆನಿಸಿದರೂ ಕಾವ್ಯಾರ್ಥ ಕೆಡುವಂತಿಲ್ಲ. ಉಪಮೇಯ, ಅಲಂಕಾರ, ಸರಳ ಛಂದಸ್ಸನ್ನು ಇವರ ಕಾವ್ಯ ಕುಸುರಿಯೊಳಗೆ ಕಾಣಬಹುದಾಗಿದೆ ಎಂದು ಲೇಖಕ ಸಮುದ್ರವಳ್ಳಿ ವಾಸು ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.