ಲೇಖಕ ಟಿ.ಕೆ. ಗಂಗಾಧರ ಪತ್ತಾರ ಅವರು ಬರೆದ ವ್ಯಕ್ತಿಚಿತ್ರಣಗಳ ಕವನ ಸಂಕಲನ-ಅಭಿವ್ಯಕ್ತಿ. ಸ್ವಾಮಿ ವಿವೇಕಾನಂದ, ದ.ರಾ.ಬೇಂದ್ರೆ, ಎಂ. ಗೋವಿಂದ ಪೈ, ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ಡಾ. ಎಂ.ಎಂ. ಕಲಬುರ್ಗಿ, ಬಳ್ಳಾರಿ ರಾಘವ, ಬಿ.ಆರ್. ಅಂಬೇಡ್ಕರ್, ಲಿಂಗಣ್ಣ ಸತ್ಯಂಪೇಟೆ, ಬೆಳಗಲ್ಲು ವೀರಣ್ಣ, ಟಿ.ವಿ. ವೆಂಕಟರಮಣಯ್ಯ, ಅಮ್ಮ ಲೋಲಾಕ್ಷ್ಮಮ್ಮ ಹೀಗೆ ಸುಮಾರು 42 ಕವಿ-ಚಿಂತಕರ ಸಾಹಿತ್ಯಕ ಸಾಧನೆಗಳ ಕುರಿತು ಕವನಗಳನ್ನು ರಚಿಸಿದ್ದು, ಸಂಗ್ರಹಿಸಿದ್ದೇ ಈ ಕವನ ಸಂಕಲನ.
ಖ್ಯಾತ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು ಕೃತಿಗೆ ಮುನ್ನುಡಿ ಬರೆದು ‘ಕವಿ ಗಂಗಾಧರ ಪತ್ತಾರ ಅವರ ಮನೋಧರ್ಮದಲ್ಲಿ ಸಮಾಜಮುಖಿಯಾದ ಸಕಾರಾತ್ಮಕ ಸಂದೇಶದ ಸ್ಪಂದನಶೀಲತೆ ತುಂಬಿ ತುಳುಕುತ್ತಿದೆ. ನಮ್ಮ ನಾಡು ನುಡಿಗೆ ಗೌರವ ತಂದ ಅನೇಕ ಹಿರಿಯ ಚೇತನಗಳನ್ನು ಕುರಿತು ವ್ಯಕ್ತಿಗಳನ್ನು ತಮ್ಮ ‘ಅಭಿವ್ಯಕ್ತಿ’ಗೆ ಆಯ್ಕೆ ಮಾಡಿಕೊಂಡಿದ್ದು, ಕವಿಯ ದೃಷ್ಟಿಕೋನ, ಅಭಿಮತ, ಅಭಿರುಚಿಯನ್ನು ಪ್ರಕಟಿಸುತ್ತದೆ. ಕವಿಯ ಬಹುಪಾಲು ಆಯ್ಕೆ ಗೌರವಾರ್ಹವಾಗಿದೆ. ಕೆಲ ಆಯ್ಕೆಗಳು ಸಾಂದರ್ಭಿಕ ಪ್ರೇರಣೆಯ ಫಲಿತದಂತೆ ಕಾಣುತ್ತವೆ. ವ್ಯಕ್ತಿಚಿತ್ರಗಳನ್ನು ಗದ್ಯ ಬರಹದಲ್ಲಿ ಬಿಡಿಸುವುದುಂಟು. ಪದ್ಯದ ಮೂಲಕ ವ್ಯಕ್ತಿಚಿತ್ರವನ್ನು ಕಟ್ಟಿದ ನಿದರ್ಶನಗಳಿದ್ದರೂ ಇಡೀ ಕವನ ಸಂಕಲನವೇ ಕವನಗಳಿಂದ ಕೂಡಿದ ನಿದರ್ಶನವಿಲ್ಲ. ಈ ದೃಷ್ಟಿಯಿಂದ ‘ಅಭಿವ್ಯಕ್ತಿ’ ಹೊಸ ಸ್ವರೂಪದ ಸಂಕಲನವಾಗಿದೆ. ಇಲ್ಲಿಯ ವ್ಯಕ್ತಿ ಚಿತ್ರಣಗಳಲ್ಲಿ ಆಯಾ ವ್ಯಕ್ತಿ ಮತ್ತು ಕವಿಯ ಶಕ್ತಿ-ಆಸಕ್ತಿಗಳು ಒಂದಾಗಿ ಪ್ರಕಟಗೊಂಡಿವೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.