ಸಾಹಿತ್ಯದ ಹರಿವಿಗೆ ಮಿತಿಗಟ್ಟಲಾಗದು, ಹಲವು ಮುಖಜದಿಂದ ಪಸರಿಸುವ ಸಾಹಿತ್ಯ ಗಂಗೆ ಬತ್ತದೆ ನಿತ್ಯ ನೂತನವಾಗಿಹಳು, ಆ ನಿಟ್ಟಿನಲ್ಲಿ ಶ್ರೀಮತಿ ಪಾರ್ವತಿ, ಎಸ್, ಬೂದೂರರವರು “ನನ್ನೊಳಗಿನ ನಾನು" ವಿನ ಮೂಲಕ ಸಾರಸ್ವತ ಪ್ರವೇಶ ಪಡೆದು ಸಿರಿ ಹೆಚ್ಚಿಸಿ ಸಾಹಿತ್ಯದ ಹರಿವು ವೃದ್ಧಿಸಿದ್ದಾರೆ. ಸಗರ ನಾಡು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ (ಕೃಷಿ ಪ್ರಧಾನತೆಯನ್ನು ಎತ್ತಿ ತೋರುವ ಊರು ನೂರು ನಗಗಳ ಊರು ನಗನೂರ) ನಗನೂರ ಗ್ರಾಮದ ಆದರ್ಶ ಗ್ರಹಿಣಿಯಾಗಿ ತಮ್ಮ ಜೀವನಾನುಭವದೊಂದಿಗೆ ಕಟ್ಟಿಕೊಟ್ಟ ಇಲ್ಲಿನ ಕವಿತೆಗಳು ವಿರಹ ಪ್ರೀತಿ- ಪ್ರೇಮದೊಂದಿಗೆ ಸಾಮಾಜಿಕ ವ್ಯವಸ್ಥೆಯ ಸ್ಥಿತಿ ಗತಿಗಳ ಕುರಿತು ಸರಳ ಹಾಗೂ ಸುಂದರವಾಗಿ ತಿಳಿಯಾಗಿ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ. ಕೃತಿಯ ಶೀರ್ಷಿಕೆಯೇ ಹೇಳುವಂತೆ ಇಲ್ಲಿರುವ ಬಹುಪಾಲು ಕವಿತೆಗಳು ಓದುಗರನ್ನು ಆತ್ಮಾವಲೋಕದೋಳು ಕೊಂಡೊಯ್ಯುತ್ತವೆ ಅಸಮಾನತೆ, ಸಾಮಾಜಿಕ ಜಂಜಾಟಗಳನ್ನು ಪ್ರತಿಬಿಂಬಿಸಿದ್ದಾರೆ. ಗುಳೆ, ಪ್ರವಾಹ, ಅನ್ನದಾತ, ಹಸಿವು, ಹೆತ್ತೊಡಲು, ಮಹಿಳೆ, ಮನುಜಮತ, ಹಿತ್ತಾಳೆ ಕಿವಿ ಹೀಗೆ ಹಲವಾರು ಕವಿತೆಗಳಲ್ಲಿ ನೋವುಗಳ ಅನುಭವ, ಕಾಳಜಿಯೊಂದಿಗೆ ದುಃಖ ನಿವಾರಣೆಗೆ ಹಾಗೂ ಸಾರ್ವತ್ರಿಕ ಸುಂದರತೆಗೆ ಹಲುಬಿದ್ದಾರೆ. ಸಂವೇದನೆ ಹೊತ್ತುಕೊಂಡು ಬಂದಿರುವ ಹಲವು ವಿಧಗಳಲ್ಲಿ ನೊಂದವರಿಗೆ ಮಿಡಿಯವ ಇಲ್ಲಿನ ಸಾಲುಗಳು ಕಾಡದೆ ಇರವು. ಪ್ರತಿಯೊಬ್ಬರು ಇಷ್ಟ ಪಟ್ಟು ಓದಿಸಿಕೊಂಡು ಹೋಗುವ ಗಟ್ಟಿ ಪದಗಳಿಂದ ಮೂಡಿಬಂದ ದಿಟ್ಟ ಸಾಲುಗಳು ಹಾಗೂ ಲಯಬದ್ಧ ರಚನೆ ಶ್ರೀಮತಿ ಪಾರ್ವತಿಯವರ ಶಬ್ಧ ಸಿರಿತನಕ್ಕೆ ಸಾಕ್ಷೀಕರಿಸುತ್ತವೆ. ನಾನು ಬಹು ಕುತೂಹಲದಿಂದ ಇಲ್ಲಿನ ಎಲ್ಲಾ ಕವನಗಳು ಓದಿ ಆತ್ಮಾವಲೋಕನದ ಜತೆಗೆ ಕರಗತಗೊಳ್ಳುತ್ತಿರುವ ಅವರ ಕವಿತಾ ರಚನಾ ಶೈಲಿಗೆ ಆನಂದಿಸಿರುವೆ. ಶ್ರೀಮತಿ ಬದೂರರವರು “ನನ್ನೊಳಗಿನ ನಾನು"ವಿನ ಮೂಲಕ ಕಾವ್ಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದಕ್ಕೆ ಅಭಿನಂದಿಸುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಹೆಚ್ಚು ಸಾಧಿಸಲಿ ಎಂದು ಸಂತಸದಿಂದ ಹಾರೈಸುವೆ ಎಂದು ವೀರಣ್ಣ ಕಲಕೇರಿ ಬೆನ್ನುಡಿಯಲ್ಲಿ ಬರೆದ್ದಾರೆ.
©2024 Book Brahma Private Limited.