‘ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ’ ಡಾ.ಎಂ. ವೀರಪ್ಪ ಮೊಯಿಲಿ ಅವರು ರಚಿಸಿರುವ ಪೌರಾಣಿಕ ಗ್ರಂಥ. ಈ ಕೃತಿಗೆ ಪ್ರೊ.ಜಯಕುಮಾರ್ ಉಪಾಧ್ಯೆ, ಪ್ರೊ. ಷ. ಶೆಟ್ಟರ್, ಡಾ.ಹಂಪನಾ, ಬಿ.ಎ. ವಿವೇಕ ರೈ ಸೇರಿದಂತೆ ಮಹತ್ವದ ಲೇಖಕರು ಬೆನ್ನುಡಿ ಬರೆದಿದ್ದಾರೆ. ಹತ್ತನೆಯ ಶತಮಾನದಲ್ಲಿ ಆಗಿಹೋದ ಹೇಮಾಹೇಮಿಗಳನ್ನು ಈ ಕಾವ್ಯದ ಪ್ರಮುಖ ಪಾತ್ರಗಳನ್ನಾಗಿಸಿ ಕನ್ನಡನಾಡಿನ ಚರಿತ್ರೆಯ ಜೀವತುಂಬಿ, ಆ ಅವಧಿಯ ಸಾಂಸ್ಕೃತಿಕ ಲೋಕವನ್ನು ಲೀಖಕ ಮೊಯಿಲಿ ಅವರು ಅನಾವರಣಗೊಳಿಸಿದ್ದಾರೆ ಎಂದು ಡಾ. ಹಂಪನಾ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಇತಿಹಾಸ ತಜ್ಞ ಪ್ರೊ.ಷ. ಶೆಟ್ಟರ್ ಅವರು ಈ ಕೃತಿಯ ಬಗ್ಗೆ ಬರೆಯುತ್ತಾ ‘ಮೊಯಿಲಿ ಅವರು ಜೈನರ ಜನನ-ಮರಣ ಸಂಹಿತೆಯನ್ನು ಸರಿಯಾಗಿ ಅರ್ಥಮಾಡಿಕೊಂಡು, ಜೈನಪಾರಿಭಾಷಿಕ ಪದಗಳಾದ ಸಲ್ಲೇಖನ, ಆರಾಧನಾ, ಸಮವಸರಣ, ಮಾನಸ್ತಂಭ, ಕಾರ್ಯೋತ್ಸರ್ಗ, ಕೇವಲತ್ವ ಮುಂತಾದವುಗಳನ್ನು ಸಂದರ್ಭೋಚಿತವಾಗಿ ಬಳಸಿರುವುದನ್ನು ಕಾಣಬಹುದು’ ಎನ್ನುತ್ತಾರೆ. ಈ ಸಂಪೂರ್ಣ ಮಹಾಕಾವ್ಯದ ಅಂಗೀರಸ ಶಾಂತರಸವಾಗಿದೆ. ಪ್ರಸಂಗಾನುಸಾರವಾಗಿ ಲೋಕಪ್ರಸಿದ್ಧ ಕಥೆಗಳನ್ನು ಸಮಾವೇಶಮಾಡಿ ಧರ್ಮೋಪದೇಶದ ಮೂಲಕ ಭೋಗದಿಂದ ತ್ಯಾಗದ ಕಡೆಗೆ ಕೊಂಡೊಯ್ಯುವ ಪ್ರಯತ್ನ ಸಾರ್ಥಕವಾಗಿದೆ ಎಂಬುದು ಪ್ರೊ. ಜಯಕುಮಾರ್ ಉಪಾಧ್ಯೆ ಅವರ ಅಭಿಪ್ರಾಯ. ಈ ಮಹಾಕಾವ್ಯಕ್ಕೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
©2024 Book Brahma Private Limited.