ರಾಮಾಯಣ ಒಂದು ಹೊಸ ಓದು

Author : ಟಿ.ಎನ್. ವಾಸುದೇವ ಮೂರ್ತಿ

Pages 216

₹ 200.00




Year of Publication: 2019
Published by: ಗೋಮಿನಿ ಪ್ರಕಾಶನ
Address: ಶ್ರೀ ವೀರಭದ್ರಸ್ವಾಮಿ ನಿಲಯ, ಒಂದನೇ ಮುಖ್ಯ ರಸ್ತೆ, ಐದನೇ ಅಡ್ಡ ರಸ್ತೆ, ವಿಶ್ವಣ್ಣ ಲೇಔಟ್, ಶಾಂತಿನಗರ, ತುಮಕೂರು – 572 102.
Phone: 9986692342

Synopsys

ನಾವಲೇಕರರ ಈ ಕೃತಿ ತಅಗಾಧ ವಿದ್ವತ್ತು ಮತ್ತು ಪರಿಶ್ರಮಗಳ ಫಲವಾಗಿದ್ದು ತಮ್ಮ ಪಾಲಿನ ಶ್ರೀರಾಮನನ್ನು ಕಂಡುಕೊಳ್ಳುವ ವ್ಯವಸಾಯವನ್ನು ಈ ಕೃತಿಯಲ್ಲಿ ನಡೆಸಿದ್ದಾರೆ. ಲೇಖಕರು ರಾಮನನ್ನು ಹುಲುಮಾನವನ ನೆಲೆಯಲ್ಲಿ ನಿಲ್ಲಿಸಿ, ರಾಮಾಯಣದಲ್ಲಿ ಬರುವ ಪವಾಡದ ಅಂಶಗಳನ್ನು ಪ್ರಕ್ಷೇಪವೆಂಬ ಕಾರಣಕ್ಕೆ ಪೂರ್ತಿಯಾಗಿ ಬದಿಗೆ ಸರಿಸಿ, ಇತಿಹಾಸದ ದೃಷ್ಟಿಯಿಂದ ರಾಮನ ಚಾರಿತ್ರ್ಯವನ್ನು ಈ ಕೃತಿಯಲ್ಲಿ ಅವಲೋಕಿಸಿದ್ದಾರೆ.

ಶ್ರೀರಾಮ ಭಾರತದ ಒಂದೊಂದು ಹಳ್ಳಿಯಲ್ಲೂ ಈಗಲೂ ಏಕೆ ಪೂಜೆಗೊಳ್ಳುತ್ತಿದ್ದಾನೆ, ಅವನು ಅಖಂಡ ಭಾರತ ದೇಶದ ಪ್ರಾಣಶಕ್ತಿಯಾಗಲು ಕಾರಣವೇನು ಮುಂತಾದ ಪ್ರಶ್ನೆಗಳನ್ನು ರಾಗ-ದ್ವೇಷಗಳಿಲ್ಲದೆ ನಿರ್ಲಿಪ್ತವಾಗಿ, ವಿದ್ವತ್ಪೂರ್ಣವಾಗಿ ಈ ಕೃತಿಯಲ್ಲಿ ಶೋಧಿಸಿದ್ದಾರೆ. ಇದನ್ನು ಕನ್ನಡಕ್ಕೆ ಅಚ್ಚುಕಟ್ಟಾಗಿ, ಸೊಗಸಾಗಿ ಅನುವಾದಿಸಿದ್ದಾರೆ ಟಿ. ಎನ್‌. ವಾಸುದೇವಮೂರ್ತಿ.

About the Author

ಟಿ.ಎನ್. ವಾಸುದೇವ ಮೂರ್ತಿ
(30 December 1974)

ಟಿ.ಎನ್.ವಾಸುದೇವ ಮೂರ್ತಿ ಅವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಹಲವು ಪ್ರಮುಖ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್  ಕಾಲೇಜು, ಜೈನ್ ವಿಶ್ವವಿದ್ಯಾಲಯ ಕಾವ್ಯಮಂಡಲ ಮೊದಲಾದ ಕನ್ನಡ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಎಂ.ಎ. ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ...

READ MORE

Reviews

ರಾಮಾಯಣದ ರಾಷ್ಟ್ರವಾದೀಕರಣ

“ತಿಣುಕಿದನು ಫಣಿರಾಯ ರಾಮಾಯಣ ಕವಿಗಳ ಭಾರದಲಿ” ಎಂಬ ಮಾತನ್ನು ಗೊಣಗುತ್ತಲೇ ತಮ್ಮದೇ ಲೋಕದೃಷ್ಟಿಯ ಹೊಸ ರಾಮಾಯಣಗಳನ್ನು ಕವಿಗಳು ಬರೆಯುತ್ತಲೇ ಇದ್ದಾರೆ;ಹೊಸ ವ್ಯಾಖ್ಯಾಗಳನ್ನು ಕೊಡುತ್ತಲೇ ಇದ್ದಾರೆ ರಾಮಾಯಣದ ಆಯ್ದ ಸನ್ನಿವೇಶಗಳನ್ನು ಲೇಖಕರು A new ap- proach to Ramayana ಎನ್ನುತ್ತಾ ತಮ್ಮದೇ ಆದ ಐತಿಹಾಸಿಕ ದೃಷ್ಟಿಕೋನದಿಂದ ವಿಶ್ಲೇಷಿಸಿರುವ ಅಂತಹ ಒಂದು ವಿಮರ್ಶಾ ಕೃತಿಯಿದು.

ನಾವಲೇಕರ್ ಅವರು ಜಗತ್ತಿನ ಬೇರೆ ಬೇರೆ 'ರಾಮಾಯಣ ವಿದ್ವಾಂಸರ ಅಭಿಪ್ರಾಯಗಳನ್ನು ಅಲ್ಲಲ್ಲಿ ಪ್ರಸ್ತಾಪಿಸುತ್ತಾ, ಪ್ರತಿಕ್ರಿಯಿಸುತ್ತಾ ಹೋಗಿರುವುದು ಕೃತಿಗೆ ಒಂದು ವ್ಯಾಪಕ ಆಯಾಮ ದೊರೆಕಿಸಿದೆ. ಆರ್ಯರ ಮೂಲ ನೆಲೆ ಯಾವುದೆಂಬ ಬಗ್ಗೆ ಭಿನ್ನಾಭಿಪ್ರಾಯಗಳುಂಟೇ ವಿನಃ ಆರ್ಯರು ಇಲ್ಲಿನ ಮೂಲನಿವಾಸಿಗಳಲ್ಲ. ಹೊರಗಿನಿಂದ ಬಂದವರು ఎంబ ಬಗ್ಗೆ ವಿದ್ವಾಂಸರ ನಡುವೆ ಅಭಿಪ್ರಾಯ ಭೇದವಿಲ್ಲವೆನ್ನುತ್ತಾರೆ. ರಾಕ್ಷಸ, ಅಸುರ. ದೈತ್ಯ, ದಾನವ ಇವೆಲ್ಲಾ ಭಾರತದ ಮೂಲನಿವಾಸಿಗಳಿಗಿದ್ದ ಬೇರೆ ಬೇರೆ ಹೆಸರುಗಳಾಗಿವೆ. ಒಂದೊಂದು ಬುಡಕಟ್ಟೂ ಒಂದೊಂದು ಹೆಸರನ್ನು ಹೊಂದಿದ್ದು ಕಾಲಾಂತರದಲ್ಲಿ ಆರ್ಯರು ಎಲ್ಲ ಬುಡಕಟ್ಟುಗಳನ್ನೂ ಸಮಾನವಾಗಿ ಮೇಲಿನ ಹೆಸರುಗಳಿಂದ ಕರೆದಿರಬಹುದೆಂದೂ ಮತ್ತು ಆರ್ಯರ ಆಕ್ರಮಣ ಹೆಚ್ಚಾದಂತೆ ಸಹಜವಾಗಿ ಬುಡಕಟ್ಟಿನವರು ಆರ್ಯರನ್ನು ದ್ವೇಷಿಸತೊಡಗಿದರೆಂದು ಸರಿಯಾಗಿಯೇ ಗುರುತಿಸುತ್ತಾರೆ. ಆದರೆ ದ್ರಾವಿಡರ ಹೆಸರನ್ನು ಇಲ್ಲಿ ಯಾಕೋ ಪ್ರಸ್ತಾಪಿಸುವುದಿಲ್ಲ. ಲೇಖಕರ ರಾಷ್ಟ್ರೀಯವಾದದ ತುಡಿತವೆ ಈ ಕೃತಿಗೆ ಕಾರಣವಾಗಿರುವ ಸಾಧ್ಯತೆಗಳು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ: “ನನ್ನ ಪ್ರಕಾರ ರಾಷ್ಟ್ರೀಯ ನೆಲೆಯಲ್ಲಿ ಶ್ರೀರಾಮನ ಹಿರಿಮೆ ಏನೆಂಬುದು ವಾಲ್ಮೀಕಿಗೆ ಸರಿಯಾಗಿ ಅರ್ಥವಾಗಿತ್ತು. ಅವನಿಗೆ ಶ್ರೀರಾಮ ತನ್ನ ಕುಟುಂಬದವರೊಂದಿಗೆ ಹೇಗೆ ನಡೆದುಕೊಂಡ ಎಂಬುದಕ್ಕಿಂತ ಭಾರತದ ಆರ್ಯ ಸಮುದಾಯಕ್ಕೆ ಏನೆಲ್ಲಾ ಮಾಡಿದೆ ಎಂಬ ಕಾರಣಕ್ಕೆ ಮುಖ್ಯವಾಗುತ್ತಾನೆ". ಈ ಮಾತುಗಳು ರಾಮಾಯಣ ಕುರಿತ ಅವರ ದೃಷ್ಟಿಕೋನವನ್ನು ಸೂಚಿಸುತ್ತವೆ. ಬುದ್ಧನ ಭಿಕ್ಷಾಟನೆಯ ಬದುಕು ಮತ್ತು ವಿರಕ್ತಿಯ ಉಪದೇಶಗಳಿಂದಾಗಿ ಭಾರತದ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಅಲ್ಲೋಲಕಲ್ಲೋಲವಾಯಿತೆಂದೂ ಕನೌಜಿನ ಹರ್ಷವರ್ಧನ ಬೌದ್ಧಧರ್ಮಕ್ಕೆ ಮತಾಂತರವಾದ ಮೇಲೆ ಭಾರತ ಅಸಾಹಾಯಕವಾಗಿ ವಿನಾಶದ ಹಾದಿ ಹಿಡಿಯಿತೆಂದು ಲೇಖಕರು ಕಳವಳಪಡುತ್ತಾರೆ. ಆದರೆ ಬೌದ್ಧಮತ ಉಚ್ಚಾಯದಲ್ಲಿರುವಾಗಲೆ ಭಾರತದಲ್ಲಿ ಚಂದ್ರಗುಪ್ತ, ಸಮುದ್ರಗುಪ್ತ, ಅಶೋಕ, ಹರ್ಷವರ್ಧನರಂತಹ ಸಾಮ್ರಾಟರ ಆಳ್ವಿಕೆಯಲ್ಲಿ ಭಾರತ ಸಮೃದ್ಧವಾಗಿದ್ದುದನ್ನು ('ಚಿನ್ನದ ಯುಗ) ಗೊತ್ತಿದ್ದೂ ಮರೆಮಾಚುತ್ತಾರೆ. ದೇಶದ ಆಳರಸರು ಯಾವುದನ್ನು ಆಶ್ರಯಿಸಿದರು. ಪ್ರೋತ್ಸಾಹಿಸಿದರು ಎನ್ನುವುದರ ಮೇಲೆ ಆಯಾ ಧರ್ಮಗಳು ಏರಿಳಿತ ಕಂಡಿರುವುದನ್ನು ಚರಿತ್ರೆ ಬಲ್ಲವರಿಗೆ ಹೇಳಬೇಕಿಲ್ಲ.

“ಹದಿನಾಲ್ಕು ವರ್ಷಗಳ ವನವಾಸ ರಾಮಾಯಣದ ಬಹುಮುಖ್ಯ ಭಾಗ... ರಾಮಾಯಣ ಎಂಬ ಪದಕ್ಕೆ ರಾಮನ ಅಲೆದಾಟ ಎಂಬ ಅರ್ಥವಿದೆ. ರಾಮನ ಕೀರ್ತಿಗೆ ಈ ಅವಧಿಯ ಬುನಾದಿಯಾಗಿದೆ.' ಎಂದು ಸರಿಯಾಗಿಯೆ ಹೇಳುವ ಲೇಖಕರು ವನವಾಸದ ಸಂದರ್ಭವನ್ನು ಅರ್ಥೈಸಿದ್ದು ಮಾತ್ರ ವಿರೋಧಾಭಾಸವಾಗಿದೆ. ರಾಮನು ವನವಾಸಕ್ಕೆ ಹೊರಡುವುದು, ಅಲ್ಲಿ ಋಷಿಮುನಿಗಳನ್ನು ಭೇಟಿಮಾಡುವುದು ಮೊದಲಾದ ಘಟನೆಗಳನ್ನು ರಾವಣನ ವಿರುದ್ಧ ಆರ್ಯರು ರೂಪಿಸಿದ ಸಂಚು ಎಂದಿದ್ದು ಈ ಅಧ್ಯಾಯವನ್ನು ತೆರೆಯ ಹಿಂದೆ' ಎಂದು ಕರೆಯಲಾಗಿದೆ. ಮೇಲ್ನೋಟಕ್ಕೆ ಈ ಋಷ್ಯಾಶ್ರಮಗಳು ತಪೋಭೂಮಿಯಂತೆ, ಯಜ್ಞಯಾಗಾದಿಗಳನ್ನು ನೆರವೇರಿಸುವ ದಿವ್ಯಕ್ಷೇತ್ರದಂತೆ ಕಾಣಿಸುತ್ತವೆ. ಆದರೆ ವಾಸ್ತವದಲ್ಲಿ ಇವೆಲ್ಲಾ ಆಯುಧಶಾಲೆಗಳಾಗಿದ್ದವು, ಗುಟ್ಟಾಗಿ ಆಯುಧಗಳನ್ನು ತಯಾರಿಸುವ ಕಾರ್ಖಾನೆಗಳಾಗಿದ್ದವು. ರಾವಣ ಹತ್ಯೆಯು ಆರ್ಯರ ಪೂರ್ವಯೋಜಿತ ಸಂಚು ಎಂಬ ನಾವಲೇಕರ್ ಅವರ ಉತ್ತೇಕ್ಷಿತ ಚಿಂತನೆಯೇ ಈ ವಿರೋಧಾಭಾಸಕ್ಕೆ ಕಾರಣ.

ಇನ್ನು ಶಬರಿಯ ಪ್ರಸಂಗವಂತೂ ಮತ್ತೂ ಹಾಸ್ಯಾಸ್ಪದವಾಗಿದೆ. ರಾಮನಿಗೆ ಸವಿಯಾದ ಹಣ್ಣುಗಳನ್ನು ರುಚಿನೋಡಿ ಕೊಡುವ ಶಬರಿ ಇಲ್ಲಿ ಓರ್ವ ವೃದ್ದೆಯಾಗಿರದೆ ಯುವತಿಯಾಗಿದ್ದಾಳೆ! ಸೀತೆಯನ್ನು ಅಪಹರಿಸಲು ರಾವಣ ಬರುವನೆಂದು ಮುಂಚೆಯೆ ತಿಳಿದಿದ್ದ ರಾಮನು ಕುಟೀರದಲ್ಲಿ ಸೀತೆಯ ಬದಲು ಶಬರಿಯನ್ನು ಇರಿಸುತ್ತಾನೆ. ಈ ವಿಚಾರವನ್ನು ಲಕ್ಷ್ಮಣನಿಗೂ ತಿಳಿಸದೆ ಮುಚ್ಚಿಡುತ್ತಾನೆ. ಪಾಪ ಅವನು ಸೀತೆಯ ಪಾದವನ್ನು ಮಾತ್ರ ನೋಡುವುದರಿಂದ ಗೊತ್ತೇ ಆಗುವುದಿಲ್ಲ! ಲಂಕೆಯಲ್ಲಿ ಸೀತೆ ಆಗ್ನಿಪ್ರವೇಶ ಮಾಡಬೇಕಾದಾಗ ರಾಮನ ಮೇಲಿನ ಪ್ರೀತಿಯಿಂದಲೇ ಶಬರಿ ಅಗ್ನಿಗೆ ಬಲಿಯಾಗುತ್ತಾಳೆ. ಇತ್ತ ದಂಡಕಾರಣ್ಯದ ಯಾರದೋ ಋಷಿಮುನಿಗಳ ಆಶ್ರಮದಲ್ಲಿ ಅಜ್ಞಾತದಲ್ಲಿದ್ದ ಸೀತೆ ಲಂಕೆಯ ಅಗ್ನಿಕುಂಡದಿಂದ ಹೇಗೆ ಹೊರಬಂದಳೆಂಬುದನ್ನು ಲೇಖಕರು ವಿವರಿಸುವ ಗೋಜಿಗೇ ಹೋಗುವುದಿಲ್ಲ.

ಮತ್ತೂ ಆಶ್ಚರ್ಯದ ಸಂಗತಿಯೆಂದರೆ ಶ್ರೀರಾಮನನ್ನೆ ಕಪಟೆಯನ್ನಾಗಿಸುವ ಈ ಮಾತುಗಳು: “ದಕ್ಷಿಣ ಭಾರತದವರ ಸಹಾನುಭೂತಿ ಗಿಟ್ಟಿಸಲು ಮತ್ತು ರಾವಣನ ವಿರುದ್ಧ ಸಾರ್ವಜನಿಕ ಅಭಿಪ್ರಾಯ ಮೂಡಿಸಲು ರಾವಣ ತನ್ನ ಹೆಂಡತಿಯನ್ನು ಕದ್ದೊಯ್ದಿರುವನೆಂದು ಅಪಪ್ರಚಾರ ಮಾಡಲಾರಂಭಿಸಿದ. ಪಕ್ಷಿಗಳೊಂದಿಗೆ ಮಾತಾನಾಡುತ್ತ, ಲತೆಗಳನ್ನು ತಬ್ಬಿಕೊಳ್ಳುತ್ತ ನನ್ನ ಸೀತೆ ಎಲ್ಲಿ ಎಂದು ಮರಗಿಡಗಳನ್ನು ವಿಚಾರಿಸುತ್ತ ಹುಚ್ಚುಹಿಡಿದವನಂತೆ ನಾಟವಾಡಿದೆ", ರಾಮಾಯಣವನ್ನು ಅದರ ವಿರೋಧಿಗಳೂ ಈ ಪರಿಯಾಗಿ ಚಿತ್ರಿಸಲಾರರು ಎನಿಸುತ್ತದೆ. ರಾಮನ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಆತುರದಲ್ಲಿ ಭಕ್ತಾದಿಗಳು ಅವನನ್ನು ಪೂರ್ತಿ ಬೆತ್ತಾಲಾಗಿಸಿದ್ದಾರೆ ಎಂದು ಲೇಖಕರು ಒಂದೆಡೆ ಹೇಳುತ್ತಾರೆ. ಆದರೆ ಈ ಮಾತು ಸ್ವತಃ ಅವರಿಗೇ ಅನ್ವಯಿಸುತ್ತದೆ.

ನಾವಲೇಕರ್ ಅವರ ಈ ಕೃತಿಯಲ್ಲಿ ಒಪ್ಪಲು ಸಾಧ್ಯವಾಗದಿರುವ ಅನೇಕ ವಿಚಾರಗಳಿವೆಯಾದರೂ ಅವರ ಆಳವಾದ ಅಧ್ಯನದ ಪರಿಣಾಮವಾಗಿ ಕೆಲವು ಅಪೂರ್ವ ಒಳನೋಟಗಳು ಓದುಗರಿಗೆ ದೊರೆಯುತ್ತವೆ. ಉದಾ: ಬಿಲ್ದಣನೆಂಬ ಪ್ರಾಚೀನ ಯುಗದ ಚಿಂತಕ ರಾಮ-ರಾವಣರ ಕುರಿತು “ಇಬ್ಬರೂ ಸಮಾನ ಶಕ್ತರು, ಸಮಾನ ಯೋಗ್ಯರು, ತಮ್ಮ ತಮ್ಮ ಕುಲದ ಏಳಿಗೆಗಾಗಿ ಸಮಾನವಾಗಿ ಶ್ರಮಿಸಿದವರು. ಯೋಗ್ಯತೆಯಲ್ಲಿ ಸರಿಸಮಾನರಾದರೂ ಕೀರ್ತಿಯಲ್ಲಿ ವ್ಯತ್ಯಾಸವಾಯಿತು. ಇದಕ್ಕೆ ಕವಿ ವಾಲ್ಮೀಕಿಯ ಪವಾಡಸದೃಶ ಪ್ರತಿಭೆಯೇ ಕಾರಣ. ಎಲೈ ರಾಜರುಗಳೆ ಕವಿಗಳ ವಿಷಯದಲ್ಲಿ ಎಚ್ಚರದಿಂದಿರಿ. ನೀವು ಏನಾಗಿದ್ದೀರೋ ಅದು ಮುಖ್ಯವಲ್ಲ..... ಅವರ ಕೃತಿಗಳಲ್ಲಿ ನೀವು ಹೇಗೆ ಬಿಂಬಿತರಾಗಿರೋ ಅದೇ ಪರಮ ಸತ್ಯವಾಗಿ ಕೊನೆತನಕ ಉಳಿದು ಬಿಡುತ್ತದೆ” ಎಂದಿರುವುದು ಕುತೂಹಲಕರವಾಗಿದೆ. ಇನ್ನು ವಾಸುದೇವಮೂರ್ತಿಯವರ ಅನುವಾದ ಅವರದೇ ಸ್ವತಂತ್ರ ಕೃತಿ ಎನಿಸುವಷ್ಟು ಸೊಗಸಾಗಿದೆ.

-ಎನ್.ಎಮ್. ಕುಲಕರ್ಣಿ

ಕೃಪೆ: ಹೊಸ ಮನುಷ್ಯ ಜುಲೈ 2020

Related Books