ಕನ್ಪಡದ ಆದಿಕವಿ ಪಂಪನ ಪದಪುಂಜಗಳು ಯಾವತ್ತಿದ್ದರೂ ಸಾಹಿತ್ಯಾಸಕ್ತರ ಕುತೂಹಲದ ಖನಿಗಳು. ಹಾಗೆಂದೇ ಆತನ ಪದಗಳನ್ನು ವಿವರಿಸುವ ಸಾಹಸಕ್ಕೆ ಕೆಲ ವಿದ್ವಾಂಸರು ಕೈ ಹಾಕುತ್ತಲೇ ಇರುತ್ತಾರೆ. ಅಂತಹವರಲ್ಲಿ ಡಾ.ಪಿ.ವಿ. ನಾರಾಯಣ ಕೂಡ ಒಬ್ಬರು.
ಪಂಪನ ಕೃತಿಗಳಾದ ’ಆದಿ ಪುರಾಣ’ ಮತ್ತು ’ಪಂಪ ಭಾರತ’ವನ್ನು ಕೂಲಂಕಷವಾಗಿ ಪರಿಶೀಲಿಸಿ ಅವುಗಳ ಆಧಾರದ ಮೇಲೆ ರಚಿಸಿದ ನುಡಿಕೋಶ ಇದು. ಪದಗಳ ಅರ್ಥದ ಜೊತೆಗೆ ಅವುಗಳು ಬಳಕೆಯಾದ ಸಂದರ್ಭವನ್ನೂ ವಿವರಿಸಲಾಗಿದೆ.
ಲೇಖಕ ಸುರೇಶ್ ನಾಗಲಮಡಕೆ ಅವರು ನಾಡಿನ ಪ್ರಸಿದ್ಧ ಪತ್ರಿಕೆ ವಿಜಯ ಕರ್ನಾಟಕದಲ್ಲಿ ಕೃತಿ ಕುರಿತು ಪ್ರಸ್ತಾಪಿಸುತ್ತಾ ’ಇತ್ತೀಚೆಗೆ ಕೆ ವಿ ನಾರಾಯಣ ಅವರು ‘ಅರಾಜಕತೆ’ ಎಂಬ ನುಡಿಯನ್ನು ವಿಶ್ಲೇಷಿಸುತ್ತಾ ಭಾಷಿಕವಾಗಿ ಚಲಿಸಿ ಆ ಪದ ನಮ್ಮ ಕಾಲದ ರಾಜಕೀಯ ನೆಲೆಗಟ್ಟನ್ನು ಹೇಳುವಲ್ಲಿ ಯಶಸ್ವಿಯಾಯಿತು. ಆ ರೀತಿಯ ಭಾಷಿಕ ಅರ್ಥಛಾಯೆಯಲ್ಲಿಯೇ ಸಮಕಾಲೀನ ದಂದುಗಗಳಿಗೆ ತೆರೆದುಕೊಳ್ಳುವ ವಿವರಗಳನ್ನು ನೀಡಬೇಕಾಗಿದೆ. ಪಿವಿಎನ್ ‘ಪಂಪನ ನುಡಿಗಣಿ’ಯಲ್ಲಿ ಆ ರೀತಿಯ ಅನೇಕ ಪದಗಳನ್ನು ಆಯ್ಕೆ ಮಾಡಿ ನೀಡಿದ್ದಾರೆ.
ಪಂಪನ ಹಾಗೆಯೇ ನಮ್ಮ ಹಲವು ಕವಿಗಳ ಪದಕೋಶಗಳು ಬೇಕಾಗಿವೆ, ಇಂತಹ ನುಡಿಗಣಿಗಳನ್ನು ಸಿದ್ಧಪಡಿಸುವಾಗ ಎಂಥ ಪದಗಳನ್ನು ಆರಿಸಿಕೊಳ್ಳಬೇಕೆಂಬ ಎಚ್ಚರವೂ ಇರಬೇಕು. ಹಿರಿಯರಾದ ಪಿವಿಎನ್ ಎಚ್ಚರ ಇಟ್ಟುಕೊಂಡೇ ಇದನ್ನು ರೂಪಿಸಿದ್ದಾರೆ. ಯುವತಲೆಮಾರಿನ ಬರೆಹಗಾರರು ‘ಪಂಪನ ನುಡಿಗಣಿ’ಯನ್ನು ಗಂಭೀರವಾಗಿ ಸ್ವೀಕರಿಸಬೇಕಾಗಿದೆ’ ಎಂದಿದ್ದಾರೆ.
©2024 Book Brahma Private Limited.