ಕನ್ನಡ ಮಹಿಳಾ ಅಧ್ಯಯನಕಾರರಲ್ಲಿ ಪ್ರಮುಖರಾದ ಎಚ್.ಎಸ್. ಶ್ರೀಮತಿಯವರ ’ಸ್ತ್ರೀವಾದ’ ಪದ ವಿವರಣಾ ಕೋಶ ಮಹತ್ವದ ಚಿಂತನಾಧಾರೆ ಸ್ತ್ರೀವಾದದ ಪರಿಕಲ್ಪನೆಗಳನ್ನು ವಿವರಿಸುವ ಪಾರಿಭಾಷಿಕ ಕೋಶವಾಗಿದೆ.
ಸ್ತ್ರೀವಾದಿ ಚಿಂತನೆಗಳನ್ನು ಕಟ್ಟಿ ಬೆಳೆಸಲು ಅಗತ್ಯವಾದ ಹೊಸ ಪರಿಕಲ್ಪನೆಗಳೂ ಅಷ್ಟೇ ಮುಖ್ಯವಾಗುತ್ತವೆ. ಇಂಥ ಹಲವು ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಈ ಮಾದರಿಗಳನ್ನು ಗಮನಿಸಿ ಕನ್ನಡದಲ್ಲಿ ಸ್ತ್ರೀವಾದಿ ಚಿಂತನೆಗಳು ಮತ್ತು ಮಹಿಳಾ ಅಧ್ಯಯನದ ಶೈಕ್ಷಣಿಕ ಅಗತ್ಯಗಳಿಗೆ ಒದಗಿ ಬರುವ ಪರಿಕಲ್ಪನೆಗಳ ಒಂದು ಕೋಶವನ್ನು ಸಿದ್ಧಪಡಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಮಹಿಳಾ ಅಧ್ಯಯನಗಳು ರೂಪಿಸಿಕೊಳ್ಳುವ ಪರಿಕಲ್ಪನೆಗಳ ಸ್ವರೂಪವೇ ಸ್ವಲ್ಪ ಭಿನ್ನ ಬಗೆಯದು, ಇದಕ್ಕೆ ಒಂದು ಮುಖ್ಯ ಕಾರಣವಿದೆ. ಸ್ತ್ರೀವಾದ, ಮಹಿಳಾ ಅಧ್ಯಯನಗಳ ಮುಖ್ಯ ಗುರಿಯೇ ಪಾರಂಪರಿಕ ಜ್ಞಾನಮೀಮಾಂಸೆಯನ್ನು ವಿವರಗಳಲ್ಲಿ ಪ್ರಶ್ನಿಸುತ್ತಾ ಅಲ್ಲಿನ ರಾಜಕಾರಣಿಗಳನ್ನು ವಿಶ್ಲೇಷಿಸುತ್ತಾ ಹೆಜ್ಜಬದುಕಿಗೆ ಸೂಕ್ತವೆನಿಸಿ ಅನ್ವಯವಾಗುವ ಜ್ಞಾನಮೀಮಾಂಸೆಯನ್ನು ಕಟ್ಟಿಕೊಳ್ಳುವುದಾಗಿದೆ.
ಸ್ತ್ರೀವಾದ, ಮಹಿಳಾ ಅಧ್ಯಯನಗಳದೇ ಪ್ರತ್ಯೇಕವಾದ ಪರಿಕಲ್ಪನೆಗಳ ಪಟ್ಟಿಯೊಂದು ಇರುವುದಿಲ್ಲ. ಬದಲಿಗೆ ವಿವಿಧ ಜ್ಞಾನಶಿಸ್ತುಗಳಲ್ಲಿ ಪರಿಣತಿ ಪಡೆದ ಅನಂತರದಲ್ಲಿ ಸ್ತ್ರೀವಾದ, ಮಹಿಳಾ ಅಧ್ಯಯನಗಳಲ್ಲಿ ಆಸಕ್ತರಾಗಿ ಮಾತ್ರವೇ ಅಲ್ಲದೆ, ವಿಶಿಷ್ಟ ಮಹಿಳಾ ರಾಜಕಾರಣವೊಂದನ್ನು ಶೋಧಿಸಬೇಕೆಂಬ ಉದ್ದೇಶದಲ್ಲಿ ನಿರತರಾದ ದೃಷ್ಟಿಕೋನಗಳು ಪುನಾರಚಿಸಲು ತೊಡಗಬೇಕಾಗುತ್ತದೆ. ಸ್ತ್ರೀವಾದಿ ಅಧ್ಯಯನಗಳಲ್ಲಿ ಇದೇ ಪರಿಕಲ್ಪನೆಗಳು ಸ್ತ್ರೀವಾದಿ ವಿಶ್ಲೇಷಣೆಗಳಿಗೆ, ಪ್ರಶ್ನೆಗಳಿಗೆ ಒಳಗಾಗುತ್ತಾ ಪರ್ಯಾಯ ಜ್ಞಾನಮೀಮಾಂಸೆಯನ್ನು ರೂಪಿಸುತ್ತಿರುತ್ತವೆ.
ಕನ್ನಡ ಜ್ಞಾನ ಲೋಕದಲ್ಲಿ ಇದುವರೆಗೂ ಬಂದಿರುವ ಸ್ತ್ರೀವಾದಿ ಪರಿಕಲ್ಪನೆಗಳನ್ನು ಸರಳ ಮತ್ತು ಸ್ಪಷ್ಟ ಅರ್ಥ ಕೊಡುವ ಈ ಪದ ವಿವರಣಾಕೋಶ, ಕನ್ನಡ ಮಹಿಳಾ ಸಂಕಥನ ನಿರೂಪಿಸುವವರಿಗೆ ಉಪಯುಕ್ತ ಕೃತಿ. ಹೆಣ್ಣು ಏಕೆ ಗಂಡಿಗಿಂತ ಭಿನ್ನವಾದ ಪರಿಭಾಷೆಯಲ್ಲಿ ಮಾತನಾಡುತ್ತಾಳೆ, ಅವುಗಳ ಹಿಂದಿರುವ ಸ್ತ್ರೀಸಂವೇದನೆಯ ಅರ್ಥವೇನು, ಮುಖ್ಯವಾಗಿ ಸ್ತ್ರೀಸಂವೇದನೆಯ ನೆಲೆಗಳಾವುವು ಎಂಬುದರ ಕುರಿತು ಚರ್ಚಿಸಲಾಗಿದೆ.
©2024 Book Brahma Private Limited.