‘ಕುಂದಾಪ್ರ ಕನ್ನಡ ನಿಘಂಟು’ ಈ ಕೃತಿಯು ವ್ಯಂಗ್ಯಚಿತ್ರಕಾರ ಲೇಖಕ ಪಂಜು ಗಂಗೊಳ್ಳಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಪ್ರೊ-ಡಿಜಿ ಪ್ರಿಂಟಿಂಗ್ ಪ್ರಕಾಶನದಿಂದ ಪ್ರಕಟವಾಗುತ್ತಿರುವ ಈ ಕೃತಿ ಪಂಜು ಗಂಗೊಳ್ಳಿ ಅವರ 20 ವರ್ಷಗಳ ಸುದೀರ್ಘ ತಪಸ್ಸಿನ ಫಲ, ಈ ಕೃತಿಗೆ ಅಕ್ಷರಗಳು, ಶಬ್ದಗಳು, ನುಡಿಗಟ್ಟುಗಳು, ಅರ್ಥಗಳಿಗೆ ಮಿಗಿಲಾದ ಒಂದು ಭಾವನಾತ್ಮಕ ಮಗ್ಗುಲೂ ಇದೆ ಎನ್ನುತ್ತಾರೆ ಪ್ರಕಾಶಕ ರಾಜಾರಾಂ ತಲ್ಲೂರು. ಕಲ್ಯಾಣಪುರ ಹೊಳೆಯಿಂದ ಶಿರೂರು ಭಟ್ಕಳ ತನ್ನಕ ಕೇಳಿಬರುವ ಒಂದು ವಿಶಿಷ್ಟ ಉಪಭಾಷೆ- ಕುಂದಾಪ್ರ ಕನ್ನಡ. ಇದು ಸೀಮಿತ ಪ್ರದೇಶದ ಭಾಷೆಯಾಗಿದ್ದರೂ ಕುಂದಾಪ್ರ ಕನ್ನಡದ ಆಳ ವಿಸ್ತಾರ ಅಗಾಧವಾದುದು. ಸಿದ್ಧಾಪುರದ ಕನ್ನಡಕ್ಕಿಂತ ಕೋಟ-ಕೋಟೇಶ್ವರ ಕನ್ನಡ ಭಿನ್ನವಾದುದು. ತಲ್ಲೂರು, ಹೆಮ್ಮಾಡಿ, ಗಂಗೊಳ್ಳಿ ಕನ್ನಡದಂತೆ ನಾವುಂದ, ಉಪ್ಪುಂದ, ಬೈಂದೂರು ಕನ್ನಡವಿಲ್ಲ. ವರ್ಷದ ಹನ್ನೆರಡು ತಿಂಗಳುಗಳಿಗೆ ತನ್ನದೇ ಆದ ಪ್ರತ್ಯೇಕ ಹೆಸರನ್ನೂ ಕುಂದಾಪ್ರ ಕನ್ನಡ ಹೊಂದಿದೆ. ಶಿಷ್ಟ ಅಥವಾ ಗ್ರಾಂಥಿಕ ಕನ್ನಡದಲ್ಲಿ ಕಂಡುಬಾರದ ಹಳಗನ್ನಡದ ಎಷ್ಟೋ ಪದಪ್ರಯೋಗಗಳು ಕುಂದಾಪ್ರ ಕನ್ನಡದಲ್ಲಿ ಇನ್ನೂ ಚಾಲ್ತಿಯಲ್ಲಿವೆ. ಪ್ರಾಚೀನತೆ ಹಾಗೂ ಭಾಷಾ ಸಿರಿವಂತಿಗೆಯಲ್ಲಿ ಕುಂದಾಪ್ರಕನ್ನಡ ಎಂಬ ಈ ಉಪಭಾಷೆ ತನ್ನ ಮುಖ್ಯಭಾಷೆಗೆ ಸರಿಮಿಗಿಲೆಂಬಂತಿದೆ. ಈ ಭಾಷೆಯ ನಿಘಂಟು ಆಗಿರುವ ಮಹತ್ವದ ಕೃತಿಯ ಸಂಪಾದಕರಾಗಿ ಸಿ.ಎ. ಪೂಜಾರಿ, ಹಾಗೂ ರಾಮಚಂದ್ರ ಉಪ್ಪುಂದ ಅವರು ಕಾರ್ಯನಿರ್ವಹಿಸಿದ್ದಾರೆ.
©2024 Book Brahma Private Limited.