ಕನ್ನಡ ಜಾನಪದ ಕ್ಷೇತ್ರದ ಅರಿವಿನ ವಿಸ್ತಾರಕ್ಕೆ ಸಹಕಾರಿಯಾಗುವ ಉದ್ದೇಶದೊಂದಿಗೆ ರೂಪುಗೊಂಡಿರುವ ಬೃಹತ್ ಗ್ರಂಥ ’ವಿಸ್ತೃತ ಜಾನಪದ ಗ್ರಂಥಸೂಚಿ’. ಕನ್ನಡ ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಕ್ಯಾತನಹಳ್ಳಿ ರಾಮಣ್ಣ ಗ್ರಂಥದ ಹಿಂದಿರುವ ರೂವಾರಿ. ಜಾನಪದವನ್ನು ಸಾಹಿತ್ಯದ ತಾಯಿಬೇರು ಎನ್ನಬಹುದು. ಮೌಖಿಕ ಪರಂಪರೆ ಬೆಳೆದು ಬಂದ ಹಾದಿಯೇ ಸಾಹಿತ್ಯಕ್ಕೆ ಮುನ್ನುಡಿ ಎಂದರೆ ಉತ್ಪ್ರೇಕ್ಷೆ ಇಲ್ಲ. ಆದರೆ ಶಿಷ್ಟ ಸಾಹಿತ್ಯಕ್ಕೆ ಸಿಕ್ಕಷ್ಟು ಸೌಲಭ್ಯಗಳು ಜಾನಪದ ಸಾಹಿತ್ಯಕ್ಕೆ ಸಿಕ್ಕಿದ್ದು ಅತೀ ಕಡಿಮೆ. ಅದರಲ್ಲೂ ಕನ್ನಡ ಜಾನಪದ ಸಾಹಿತ್ಯದ ಅಧ್ಯಯನಕ್ಕೆ ಅಗತ್ಯವಾದ ಗ್ರಂಥಗಳು ಬೆರಳೆಣಿಕೆಯಷ್ಟು. ಕನ್ನಡದಲ್ಲಿ ಇದುವರೆಗೆ ಪ್ರಕಟವಾಗಿರುವ ಜಾನಪದ ಕುರಿತ ಗ್ರಂಥಗಳೆಷ್ಟು, ಅವುಗಳ ಬೆಳವಣಿಗೆ ಹೇಗೆ, ವಿಷಯ ವೈವಿಧ್ಯ ಹೇಗೆ ಮುಂತಾದ ನಿಟ್ಟಿನಲ್ಲಿ ಗ್ರಂಥಸೂಚಿಯೊಂದರ ಮರುಹುಟ್ಟಿನ ಅಗತ್ಯ ಕಂಡು ಬಂದುದ್ದರ ಫಲವೇ ‘ವಿಸ್ತೃತ ಜಾನಪದ ಗ್ರಂಥಸೂಚಿ’.
ಡಾ.ಹಾ.ಮಾ.ನಾಯಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಈಗಾಗಲೇ ಒಬ್ಬಿಬ್ಬರು ನಡೆದಿದ್ದಿದೆ. ಆದರೆ ಹೆಚ್ಚು ವಿಸ್ತಾರವಾಗಿ ಪ್ರಕಟಣೆ ಕುರಿತ ಇತಿಹಾಸ ಒಳಗೊಂಡು ಇದುವರೆಗೆ ಎಲ್ಲಿಯೂ ಕಾಣಸಿಗದಷ್ಟು ಹೇರಳ ಮಾಹಿತಿಗಳನ್ನು ಹೊತ್ತು ಗ್ರಂಥಸೂಚಿ ರೂಪುಗೊಂಡಿದೆ. ಅಲ್ಲಲ್ಲಿ ಸಣ್ಣಪುಟ್ಟ ಕೊರತೆಗಳು ಕಂಡುಬಂದರೂ ತುಂಬಾ ಉಪಯುಕ್ತ ಗ್ರಂಥವಾಗಿ ಬೃಹತ್ ರೂಪದಲ್ಲಿ ಹೊರಬಂದಿದೆ. ಕ್ಯಾತನಹಳ್ಳಿ ರಾಮಣ್ಣ ಅವರು ಕ್ಷೇತ್ರಕಾರ್ಯಕ್ಕೆ ನಲವತೈದು ವರ್ಷಗಳಿಗೂ ಹೆಚ್ಚು ಕಾಲ ಮೀಸಲಿಟ್ಟಿದ್ದಾರೆ. ಅವರ ಕ್ಷೇತ್ರಕಾರ್ಯದ ಅನುಭವ, ಜೊತೆಗೆ ಹಾ.ಮಾ.ನಾಯಕ ಅವರ ಮೇಲ್ಪಂಕ್ತಿ ಇವುಗಳಿಂದ ಗ್ರಂಥಸೂಚಿ ಸಾಕಷ್ಟು ಸಶಕ್ತವಾಗಿ ರೂಪುಗೊಂಡಿದೆ. ಅನುಬಂಧವನ್ನು ಸಿದ್ಧಪಡಿಸುವಲ್ಲಿ ಟಿ.ಎಸ್.ರಾಜಪ್ಪ ಸಹಕರಿಸಿದ್ದು, ಈ ಮಹತ್ವದ ಕೃತಿಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹೊರತಂದಿದೆ. ಗ್ರಂಥಸೂಚಿಯಲ್ಲಿ ನೇರವಾಗಿ ಸಂಗ್ರಹಿಸಿರುವ ನಮೂದುಗಳ ಸಂಖ್ಯೆ 2285, ಇತರೆ ಮೂಲಗಳಿಂದ ಸಂಗ್ರಹಿಸಿರುವ ನಮೂದುಗಳ ಒಟ್ಟು ಸಂಖ್ಯೆ- 1513, ಹೀಗೆ ಒಟ್ಟು 3798 ಗ್ರಂಥಗಳ ಬಗ್ಗೆ ಮಾಹಿತಿ ಇದೆ.
©2024 Book Brahma Private Limited.