ದೈನಂದಿನ ಬಳಕೆಯ ಕನ್ನಡ ಭಾಷೆಯಲ್ಲಿ ಕ್ರಿಯಾಶೀಲ ಹಾಗೂ ನಿತ್ಯ ಬಳಕೆಯ ಪದಗಳನ್ನು ಸಂಸ್ಕೃತಿಯ ವಿಶಿಷ್ಟತೆಯೊಂದಿಗೆ ವಿವರಿಸುವ ಪರಿಕಲ್ಪನೆಯೊಂದಿಗೆ ಕನ್ನಡ ಜಾನಪದ ನಿಘಂಟು ಮೂಡಿಬಂದಿದ್ದು, ಜಾನಪದದೊಂದಿಗೆ ಸಂಬಂಧ ಹೊಂದಿರುವ ಗ್ರಂಥಪದಗಳನ್ನು ವಿಶ್ಲೇಷಿಸುವ ಮಾದರಿಯನ್ನು ಇಲ್ಲಿ ಅನುಸರಿಸಲಾಗಿದೆ. ಪ್ರಯೋಗಾತ್ಮಕ ಉಚ್ಚಾರ ಎಂದಿನಂತೆ ಉಳಿಸಿಕೊಳ್ಳುವ ಜೊತೆಗೆ ಬಳಕೆಯ ಸಂದರ್ಭವನ್ನು ಉಲ್ಲೇಖಿಸಿ, ಕಾಲ/ದೇಶಗಳ ಮೂಲಕ ಭಿನ್ನ ಪಠ್ಯತೆಯನ್ನು ಇಲ್ಲಿ ನೀಡಲಾಗಿದೆ. ಪದದ ಸಾಂಸ್ಕೃತಿಕ ಮತ್ತು ಸಾಮಾಜಿಕ ಮಹತ್ವವನ್ನು ಗುರುತಿಸುವ ಜೊತೆಗೆ ಅದರ ಸಮಾನ ರೂಪಗಳನ್ನು ಹಾಗೂ ಭಿನ್ನ ರೂಪಗಳನ್ನು ಕೊಡುವ ಮೂಲಕ ಪದಸಂಸ್ಕೃತಿಯನ್ನು ವಿಶ್ಲೇಷಿಸಲಾಗಿದೆ. ಆಹಾರ, ಔಷಧಿ, ನಂಬಿಕೆ, ಕಲೆಗಳ ಜೊತೆಗೆ ಪ್ರಕೃತಿ-ಸಂಸ್ಕೃತಿ ಹಾಗೂ ವಿವಿಧ ಸಮುದಾಯಗಳ ವೈವಿಧ್ಯಮಯ ಪದ ಬಳಕೆಯ ವಿಶೇಷಗಳನ್ನು ಈ ನಿಘಂಟಿನಲ್ಲಿ ಕಟ್ಟಿಕೊಡುವ ಮೂಲಕ ಅಧ್ಯಯನ ಲೋಕಕ್ಕೆ ನಿಘಂಟಿನ ಕೊಡುಗೆ ಸ್ತುತ್ಯರ್ಹ.
ಹಿರಿಯ ಜನಪದ ವಿದ್ವಾಂಸರೂ, ಲೇಖಕರೂ ಆದ ಪ್ರೊ. ಡಿ.ಬಿ. ನಾಯಕ ಮತ್ತು ಡಾ. ರಾಮೇಗೌಡ (ರಾಗೌ) ಕೃತಿ ಹೊರಬರಲು ಕಾರಣವಾಗಿರುವ ಶಕ್ತಿಗಳು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆರ್ಥಿಕ ನೆರವಿನೊಂದಿಗೆ ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ನಿಘಂಟುಗಳು ಪ್ರಕಟಗೊಂಡಿವೆ.
ನಿಘಂಟಿನ ಮೂರನೇ ಸಂಪುಟದಲ್ಲಿ ಕು ಪದದಿಂದ ಖೌ ಪದದವರೆಗಿನ ಜನಪದ ಪದಗಳನ್ನು ಪ್ರಕಟಿಸಲಾಗಿದೆ.
©2025 Book Brahma Private Limited.