ಒಡೆದ ಬಣ್ಣದ ಚಿತ್ರಗಳು

Author : ಮಹಾಂತೇಶ ಪಾಟೀಲ

₹ 0.00




Year of Publication: ೨೦೧೭
Published by: ಲಡಾಯಿ ಪ್ರಕಾಶನ ಗದಗ
Address: ಲಡಾಯಿ ಪ್ರಕಾಶನ, 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

 ಈ ಕವನ ಒರಟು ವಿವರಗಳ ಮೀಮಾಂಸೆಯಲ್ಲಿ ಬಳಲಿದರೂ, ಈ ಸಾಲುಗಳು ಅದಕ್ಕೊಂದು ಕಾಣ್ಕೆಯ ಜಿಗಿತವನ್ನು ನೀಡಿಬಿಟ್ಟಿವೆ. ಒಂದು ಕವನ ಇನ್ನೊಂದನೆನನೋ ನೆನಪಿಸದೇ. ಸೂಚಿಸದೇ ಕಾವ್ಯವಾಗದು. ಈ ಸಾಲುಗಳು ವಾಲ್ಮೀಕಿಯವರೆಗೆ ನಮ್ಮ ನೆನಪನ್ನು ಚಾಚಿ ಬಿಡುತ್ತದೆ. ಕವಿಯೊಬ್ಬ ಕಾವ್ಯ ಲೋಕಕ್ಕೆ ಅಡಿಯಿಡುವ ಬಗೆಯಿದು. ಈ ಸಂಕಲನದಲ್ಲಿರುವ ಐವತ್ತು ಕವನಗಳಲ್ಲಿ ಮೂರು ಬಗೆಯಲ್ಲಿ ಭಾವದ ಚಾಚು ಇದೆ. ಮೊದಲನೆಯದು- ಆಧುನಿಕವಾದ ಎಲ್ಲವನ್ನೂ ಗ್ರಹಿಕೆಯ ತೆಕ್ಕೆಯೊಳಗೆ ಹಿಡಿದು ಕಾವ್ಯದೊಳಗೆ ಅದಕ್ಕೊಂದು ಅರ್ಥವ್ಯಾಪ್ತಿ ಕೊಡುವ ಪ್ರಯತ್ನ ಮಾಡುತ್ತವೆ. ಎರಡನೆಯದು- ವಯೋಸಹಜ ಭೂಮಿಕೆಯ ಭಾವಯಾನದಲ್ಲಿ ಅರ್ಥಪ್ರಾಮಾಣಿಕೆಯನ್ನು ಅರಸುತ್ತವೆ. ಮೂರನೆಯದು- ಒಂದು ಸಾಂಸ್ಕೃತಿಕ ನೆಲೆ ಮತ್ತು ಅದನ್ನು ತಾನು ಪರಿಭಾವಿಸುವ ಬಗೆಯದ್ದು. ಈ ಮೂರು ಬಗೆಯಲ್ಲೂ ಭಾಷಿಕ ನುಡಿಗಟ್ಟು ಪರಸ್ಪರ ಭಿನ್ನವಾಗಿದೆ. ʼಬಯೋಡಾಟಾ, ಸೇರುಪೇಟೆ, ಋತುಗೀತ, ಒಡೆದ ಬಣ್ಣದ ಚಿತ್ರಗಳುʼ- ಮುಂತಾದವುಗಳು ಸುಮಾರಾಗಿ ಮೊದಲ ಗುಂಪಿನ ಕವನಗಳು. ಜಾಗತೀಕರಣಗೊಂಡ ವರ್ತಮಾನ ಬದುಕುಗಳ ದುಗುಡದ ಚಿತ್ರಗಳು ಇಲ್ಲಿವೆ.

About the Author

ಮಹಾಂತೇಶ ಪಾಟೀಲ

ಕವಿ ಮಹಾಂತೇಶ ಪಾಟೀಲ ಅವರು 1986 ಜೂನ್ 01 ಕೊಡಗು ಜಿಲ್ಲೆಯ ಚಿಕ್ಕಅಳುವಾರದಲ್ಲಿ ಜನಿಸಿದರು. ಮಂಗಳೂರು ವಿ.ವಿಯಲ್ಲಿ  ಸ್ನಾತಕೋತ್ತರ ಪದವಿ ಪಡೆದಿರುವ ಅವರು ಕನ್ನಡ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ಪ್ರಸ್ತುತ ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಣೆ. ‘ಒಡೆದ ಬಣ್ಣದ ಚಿತ್ರಗಳು’ ಅವರ ಚೊಚ್ಚಲ ಕವನ ಸಂಕಲನ 2017ರಲ್ಲಿ ಪ್ರಕಟವಾಗಿದೆ. ...

READ MORE

Excerpt / E-Books

ಒರಟು, ವ್ಯಂಗ್ಯವೇ ಇವುಗಳ ಸ್ಥಾಯಿ ಗುಣ. ಚಿತ್ರಗಳು ಕ್ರೂಡೀಕರಣಗೊಂಡಂತೆಲ್ಲಾ ನೇತ್ಯಾತ್ಮಕ ಪ್ರತಿಕ್ರಿಯೆ ಚಿಮ್ಮುತ್ತಿರುತ್ತದೆ. ಆದರೆ ಇವು ಕವನಗಳನ್ನು ಗಾಢ ಅನುಭವವಾಗಿಸುವಲ್ಲಿ ತಲ್ಲೀಣವಾಗುತ್ತವೆ. ತಾನು ಗಮನಿಸುವುದರ ಹಿಂದೆ ಇರುವ ನೈತಿಕ ನಿಲುಮೆ ಮೊದಲೇ ಪ್ರಕಟವಾಗುವ ಕಾರಣ, ಕವನ ವಿವರಗಳನ್ನು ಹೇರುತ್ತಾ ಹೋದಂತೆ ಅನಿಸುತ್ತದೆ. ಈ ಗಮನಿಸುವ ಹವಣಿಕೆ ಮುಖ್ಯ, ಆದರೆ ನೇರ ಕಾಣುವುದರಾಚೆಗೆ ಇನ್ನೊಂದು ಅರ್ಥವನ್ನು ಹೊಳೆಯಿಸದಿದ್ದರೆ ಕವನ ಸಪಾಟಾಗುವ ಅಪಾಯವಿದೆ. ಅಂತಹ ಅಪಾಯ ಕವನಗಳಲ್ಲಿ ಅಲ್ಲಲ್ಲಿ ಇಣಿಕಿ ಹಾಕಿದಂತೆ ಭಾಸವಾಗುತ್ತದೆ. ಅಶಾಂತ ಲೋಕದೃಷ್ಟಿ, ಅದು ನೀಡುವ ವಿವರ- ನನಗೂ ಗೊತ್ತಿರುವಂತಹದು. ಕವಿ ಏನು ಹೊಸದು ಹೇಳುತ್ತಿದ್ದಾನೆ? ಎಂಬ ಕುತೂಹಲ ನನ್ನದು…!! ಇದು ಓದುಗನಾದ ನನಗೂ-ಕವಿಗೂ ಇರುವ ಅನುಸಂಧಾನದ ಕುರಿತಾದದ್ದು. ಈ ಸಾಲುಗಳನ್ನು ನೋಡಿ: ಬೆಂಗಳೂರಿನಲ್ಲಿ ಬಿಳಿತಿಮಿಂಗಲು, ಹೆಬ್ಬೊಟ್ಟೆ ಸಮೀಕ್ಷೆ/ ಮಂಗಳೂರಿನಲ್ಲಿ ಬಿಕಿನಿಗಳ ಒಳನೋಟʼ (ಬಯೋಡಾಟ), ಬತ್ತಿದ ಬಂದೂಕು, ಬೊಜ್ಜಿನ ಹುತ್ತ/ ಬಿಕರಿಗಿವೆ… / ಮೈಥುನದ ಮಾರುಕಟ್ಟೆಯಲ್ಲಿʼ - ಇದನ್ನು ನಿಷೇಧಾತ್ಮಕವಾಗಿ ನಾನು ಹೇಳುತ್ತಿಲ್ಲ. ವಿವರಗಳು ವ್ಯಗ್ರವಾಗುವಾಗ ಅದಕ್ಕೊಂದು ಸ್ಪೋಟಕ ಗುಣ ಇರುತ್ತದೆ. ಅದನ್ನು ಒಂದು ಹದದಲ್ಲಿ ಮುಂದಿಡುತ್ತಾ ಬರುವ ತಾಂತ್ರಿಕ ಸಂಯಮ ಇಲ್ಲಿ ಕಡಿಮೆ ಎಂಬುವುದಷ್ಟೇ ನನ್ನ ಅನಿಸಿಕೆ. ***** ಎರಡನೆಯ ಗುಂಪಿನ ಕವನಗಳು ಹೆಚ್ಚು ವೈಯಕ್ತಿಕ ಭಾವಸ್ಪಂದನದಲ್ಲಿ ತೊಡಗುತ್ತವೆ. ನವಿರುತನ, ಸೂಕ್ಷ್ಮ ಸೆಳೆತಗಳ ಹೆಣಿಗೆ ಈ ಕವನಗಳಲ್ಲಿದೆ. ʼಸನ್ಮಾನ್ಯ ಸಖಿಗಾಗಿ, ಸವಿ ಗಜಲ್‌, ಗೊಬ್ಬರ ಹೂವು, ನಿವೇದನೆ, ಪ್ರೇಮಮಯಿ- ಮುಂತಾದ ಕವನಗಳು ಈ ವಿಶಿಷ್ಟ ತುಡಿತ ತೋರುತ್ತ ಹದಮಿರದ ಭಾವಲಯದ ಕರ್ಷಣ ಹೊಂದಿವೆ. ʼಪ್ರೀತಿಸುತ್ತೇನೆ ಎನ್ನುವುದಕ್ಕೆ/ ನನಗಿಂತ ಬೇರೇನು ಸಾಕ್ಷಿ/ ಬೇಕಿತ್ತು ನಿನಗೆ? (ನಿವೇದನೆ). ʼಬರೀ ನಿನ್ನ ನೆರಳ ಬೆರಳ/ ತುದಿ ಸಿಕ್ಕರೆ ಸಾಕು/ ಹೀಗೆ ಗೊಬ್ಬರವಾಗಿರುವೆʼ (ಗೊಬ್ಬರದ ಹೂ)- ಈ ಸಾಲುಗಳಿಗೊಂದು ಚೇತೋಹಾರಿ ಗುಣವಿದೆ. ಕವಿಯೊಬ್ಬನಿಗೆ ಈ ರೀತಿಯ ಶುಭ್ರಕಾವ್ಯ ಲಯ ದಕ್ಕುವುದು ಮುಖ್ಯ. ಲಯ ಫಳಗಲು ಇಂತಹ ಭಾವ ಚಿತ್ರಿಕೆಗಳು ಬಲು ಸಹಾಯ ಮಾಡುತ್ತವೆ. ಭಾವಾತೀರೇಕಕ್ಕೆ ಹೋಗದ ಸಂಯಮ ಮುಖ್ಯ. ಈ ಕವಿಯಲ್ಲಿ ಈ ಸಂಯಮ ಹುಲುಸಾಗಿದೆ. ʼನಿನ್ನ ಬೆರಳುಗಳು/ ಸವೆದು ಹೋದಾವೆಂದು/ ಕೈ ಹಿಡಿದು ಸುತ್ತಲಿಲ್ಲ/ ಎಂಬಿತ್ಯಾದಿ ಸಾಲುಗಳಲ್ಲಿ. ಈ ರೀತಿಯ ಕವನಗಳ ಲಕ್ಷಣವಾದ ʼವಿಷಾದʼ ಹಾಗೂ ʼಯಾತನೆʼ ಇದೆ. ಎಲ್ಲರು ಕವಿಯಾಗೋದು ವಯೋಮಾನದ ಋತುಮಾನಕ್ಕೆ ಒಡ್ಡಿಕೊಂಡೆಯೇ. ಈ ಭಾವ ಪಟಲಗಳು ಇಲ್ಲವೆಂದು ಕವಿಯೊಬ್ಬ ನಟಿಸಿದರೆ, ಅದು ಸೃಜನಶೀಲ ಆತ್ಮವಂಚನೆಯಾಗುತ್ತದೆ. ಹೊಸದಾಗಿ ಹೇಳುವ ತುರ್ತು ತನ್ನಲ್ಲಿದೆಯೆಂದು ಸಾಬೀತು ಪಡಿಸುವುದು ಕಾವ್ಯ ಪ್ರವೇಶಗೈಯುವ ಕವಿಯ ವ್ಯಕ್ತಿಗತ ಲಕ್ಷಣವಾಗಿದೆ. ಇದಿಲ್ಲದಿದ್ದರೆ ಆತನಿಗೊಂದು ಚಹರೆ ಎಲ್ಲಿರುತ್ತದೆ?. ಈ ಕವನಗಳೆಲ್ಲ ಶಿಷ್ಟ ಕನ್ನಡದಲ್ಲಿರುವುದು ಕುತೂಹಲಕಾರಿ. ಭಾಷಿಕವಾಗಿ ಈ “ಪಳಗಿಸ್ಪಟ್ಟ ಭಾಷಾ ಶೈಲಿ” ಯಾಕೆ ಕವಿ ಆರಿಸಿಕೊಳ್ಳುತ್ತಾನೆ?. ಈ ಕವಿಯ ಉಳಿದ ಕೆಲವು ಕವನಗಳನ್ನು ನೋಡಿದರೆ ಈ ಶಿಷ್ಟ ಕನ್ನಡ ಈ ಕವಿಯ ಒಳಸೆಲೆಯ ಭಾಷೆ ಅಲ್ಲ ಅನಿಸುತ್ತದೆ. ಇದು ಆರೋಪ ಅಲ್ಲ. ಭಾಷಿಕ ಶೈಲಿಯ ಆಯ್ಕೆ ಎಂಬುವುದು ಇಡೀ ಕಾವ್ಯ ಪ್ರಜ್ಞೆಯ ತಾತ್ವಿಕ ಹೆಜ್ಜೆಗತಿಯ ಪುರಾವೇ ಕೂಡ. ಆದ್ದರಿಂದಲೇ ಇನ್ನೊಂದಷ್ಟು ಕವನಗಳು ಪ್ರತ್ಯೇಕವಾಗಿ ಗಮನ ಸೆಳೆಯುತ್ತವೆ. ʼಅವ್ವನ ಖಾನಾವಳಿ, ಅಪ್ಪನ ಸವಾರಿ, ಅಪ್ಪನ ಕೆರೆ, ಮೆಲುಕು,- ಮುಂತಾದ ಕವನಗಳಲ್ಲಿ ತನ್ನ ವೈಯಕ್ತಿಕ ಸಂಬಂಧ- ನೋಡುವ ಬಗೆ- ಕವನದ ವಸ್ತುವಿನೊಂದಿಗೆ ಹೊಂದುವ ಭಾವಸಂವಾದಗಳಿಗೊಂದು ಆಳ ಇದೆ. ಪ್ರಾಯಶಃ ʼಅಮ್ಮ ಖಾನಾವಳಿʼ- ಈ ಸಂಕಲನದ ಅತ್ಯುತ್ತಮ ಕವನ. ಈ ಬಗೆಯ ಭಾಷಾ ಬಳಕೆಯ ನುಡಿಗಟ್ಟಿನಿಂದ ಕಾವ್ಯಕ್ಕೊಂದು ಸಹಜ ತಾತ್ವಿಕ ಲಯದ ನುಡಿಗಟ್ಟು ಸಾಧ್ಯವಾಗಿದೆ. ಅಂತಹ ಕವಿತೆಗಳು ಚೇತೋಹಾರಿಯಾಗಿವೆ. ತಾಯಿಯೊಬ್ಬಳು ಲೇವಡಿಗಳನ್ನು ನಿರ್ಲಕ್ಷಿಸಿ ಬದುಕು ಕಟ್ಟಿಕೊಳ್ಳುತ್ತ ಊರಿಗೆ ತಾಯಿಯಾಗುವ ಬಗೆಯನ್ನು ಕಟ್ಟಿಕೊಡುವುದರಲ್ಲಿ ಒಂದು ಬೆರಗಿದೆ. ತಣ್ಣಗಿ ವ್ಯಗ್ರತೆ ಇದೆ : ನಿಜ ನಿಜ ಅನಿಸುವಷ್ಟು ದಟ್ಟ ವಿವರಗಳಿವೆ. ಇಷ್ಟು ಗಾಢವಾಗಿ ವಿವರಗಳನ್ನು ಹಿಡಿದು ಕವನ ಬೆಳೆಸುವ ಕಸುವು ಈ ಕವಿಯ ಬಗ್ಗೆ ಭರವಸೆ ಹುಟ್ಟಿಸುತ್ತದೆ. ಭರವಸೆ… ಅದು ಕೀವರ್ಡ್‌ ಬಾಯುಪಚಾರಕ್ಕೆ ಈ ಮಾತು ಹೇಳುತ್ತಿಲ್ಲ. ಈ ಸಂಕಲನದಲ್ಲಿ ವಾಚ್ಯವಾದಕ್ಕಿಳಿಯುವ ಕವನಗಳಿವೆ. ಇದರ ಸೆಳೆದ ತುಂಬಾ ದೂರ ಒಯ್ಯದ. ಕವಿ ಈ ಮರಳ ಸುಳಿಯಿಂದ ಪಾರಾಗಿದ್ದಾರೋ ಗೊತ್ತಿಲ್ಲ. ಹಾಗೆಯೇ ಶಿಷ್ಟ ಭಾಷಿಕ ಲಯದ ಹಾದಿ ವಿಸ್ತಾರ ಹೆದ್ದಾರಿಯಡೆಗೆ ಒಯ್ಯುವುದು ದುಸ್ತರ… ತನ್ನ ಕಾವ್ಯದ ನುಡಿಗಟ್ಟನ್ನು ಪಡೆಯುವ ಗಂಭೀರ ಪ್ರಯತ್ನದ ಪ್ರಯೋಗಗಳು ಈ ಸಂಕಲನದಲ್ಲಿವೆ. ಈ ಪ್ರಯೋಗಗಳ ಯಶಸ್ಸಿನಲ್ಲಿ ತೃಪ್ತಿಕಂಡ ಪುರಾವೆ ಇಲ್ಲಿಲ್ಲ. ಕವಿಯ ಈ ನುಡಿಗಟ್ಟಿನ ಹುಡುಕಾಟ ಹಲವು ಪ್ರಯೋಗಗಳಿಗೆ ಪ್ರೇರೆಪಿಸುತ್ತದೆ. ಕಾವ್ಯದಲ್ಲಂತೂ ಈ ಪ್ರಯೋಗಗಳೇ ಕಾವ್ಯವನ್ನು ದಟ್ಟವೂ, ದಿಟ್ಟವೂ ಮಾಡುವ ಮಂತ್ರವಾಗಿವೆ. ಇವು ಸಾಕು ಪ್ರತಿಭೆಯನ್ನು ವಿಶಿಷ್ಟವಾಗಿ ಗುರುತಿಸುವುದಕ್ಕೆ. ಮುಂದಿನ ದಿನಗಳಲ್ಲಿ ಈ ಅರೆಕೋರೆಗಳ ಮೂಲಕವೇ ತನ್ನದೇ ನುಡಿಗಟ್ಟು, ತಾತ್ವಿಕ ಭೂಮಿಕೆ ಮೂಲಕ ಕನ್ನಡ ಕಾವ್ಯವನ್ನು ಮುಂದೊತ್ತಬಲ್ಲ ಪ್ರತಿಭೆಯಿದು. ಈ ನಿರೀಕ್ಷೆಯ ಭಾರವನ್ನು ಕೃತಜ್ಞತೆಯೊಂದಿಗೆ ಹೊತ್ತು ಕವಿ ಗಂಭೀರವಾಗಿ ಬೆಳೆಯಬಲ್ಲ. ಆ ಸಂಯಮ, ವಿನಯ ಮತ್ತು ದಾಡ್ಯತೆ ಇಲ್ಲಿ ಕಂಡಿದೆ. ******* ಈ ಸಂಕಲನ ಇತ್ತಿಚೀಗಿನ ಯುವ ಕವಿಗಳ ಕಾವ್ಯದ ಎಲ್ಲಾ ಗುಣದೋಷಗಳ ಪ್ರಾತಿನಿಧಿಕ ಉದಾಹರಣೆಯಂತಿದೆ. ಹೊಸ ತಲ್ಲಣಗಳಿಗೆ, ಚಳುವಳಿಯೋಪಾದಿಯ ಸಾಮಾಜಿಕ ನೆಲೆಗಟ್ಟು ಇಲ್ಲ. ಹಾಗೆಂದು ವ್ಯಕ್ತಿಗತ ನಿಲುವಿನಲ್ಲಷ್ಟೇ ಕಾವ್ಯ ರಚಿಸುವ ಬಗ್ಗೆ ಅಗಾದ ಅತೃಪ್ತಿ, ಹಲವು ಕವಿಗಳನ್ನು ಕಾಡುತ್ತಿರುವಂತಿದೆ. ಹೊಸ ಮಾಧ್ಯಮಗಳ ಚಲಾವಣೆಯಿಂದಾಗಿ, ಎಲ್ಲವನ್ನೂ ಬಿಡುಬೀಸಾಗಿ ಪ್ರಕಟಿಸುವ ಸ್ವಾತಂತ್ರ್ಯದಿಂದಾಗಿ ತಾನು ಸಾಗುವ ದಾರಿ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ಕವಿಗಳಿಗೆ ಲಭ್ಯವಾಗುತ್ತಿಲ್ಲ. ಕಾವ್ಯವನ್ನು ವಿಮರ್ಶಿಸುವ ಚರ್ಚಿಸುವ ಹೊಸ ಓದಿನ ವೇದಿಕೆಗಳು ಸಂಕುಚಿತವಾಗುತ್ತಿವೆ. ಇದೊಂದು ಸಂಕಷ್ಟದ ಕಾಲ: ಇಂತಹ ಸಂದಭದಲ್ಲೂ ಕಾವ್ಯದ ಪರಿಭಾಷೆ, ನುಡಿಗಟ್ಟು- ಕಾವ್ಯದ ಸಂದರ್ಭವನ್ನು, ಲೋಕದೃಷ್ಟಿಯನ್ನು ಸಾಮಾಜಿಕ ಬದ್ಧತೆಯನ್ನು ನಿರ್ವಚಿಸಬಲ್ಲದು ಎಂಬ ನಂಬಿಕೆ ಕವಿಗೆ ಇರಬೇಕಾದುದು ಮುಖ್ಯ. ಈ ಸಂಕಲನ ಅಂತಹ ಒಂದು ಸೃಜನಶೀಲ ಸ್ಥೈರ್ಯವನ್ನು ಪ್ರಕಟಿಸಿದೆ. (ತೀರ್ಪುಗಾರರ ಟಿಪ್ಪಣಿ) ಕೆ.ಪಿ ಸುರೇಶ, ವಿಮರ್ಶಕರು ಮತ್ತು ಸಾಂಸ್ಕೃತಿಕ ಚಿಂತಕರು. ʼಒಡೆದ ಬಣ್ಣದ ಚಿತ್ರಗಳುʼ ಕವಿತಾ ಸಂಕಲನ ಲವಲವಿಕೆಯ ಭಾಷೆ ಮತ್ತು ಭರವಸೆ ಮೂಡಿಸುವ ಕವಿತೆಗಳಿಂದ ಗಮನ ಸೆಳೆಯುತ್ತದೆ. ʼನಾವು ಗುಡಿ ಕಟ್ಟುವ ಬದಲು/ ಮರ ನೆಟ್ಟಿದ್ದರೆ/ ಹತ್ತಾರು ಹಕ್ಕಿಗಳಾದರೂ/ ಗೂಡು ಕಟ್ಟುತ್ತಿದ್ದವುʼ ಎನ್ನುವ ಮಹಾಂತೇಶ ಪಾಟೀಲ ʼಎನ್ನ ಕಾಲೇ ಕಂಬ/ ದೇಹವೇ ದೇಗುವʼ ಎಂಬ ಜಂಗಮಕ್ಕಳಿವಿಲ್ಲದ ನಿಲುವಿನವರು. ಜೀವಪರ ಸಂವೇದನೆಯ ಇವರ ಕವಿತೆಗಳು ಸೂಕ್ಷ್ಮ ಒಳನೋಟಗಳನ್ನು ಹೊಂದಿವೆ. “ಇಬ್ಬನಿ ಎಂದರೆ ಇರುಳು ಬೆಳಕಿಗಾಗಿ/ ಸುರಿಸುವ ಕಂಬನಿ/ ಹಕ್ಕಿಪಕ್ಕಿಗಳ ಎದ್ದೆಳಿಸಲು ಚಂದ್ರ ಚಿಮಿಕಿಸುವ ಎಳೆನೀರುʼ ಎನ್ನುವ ಪ್ರಕೃತಿ ಪ್ರೀತಿಯ ಈ ಕವಿ ʼಆತಂಕವಾದಿ ಹಳವಂಡಗಳುʼ ಕವಿತೆಯಂತಹ ತೀವ್ರ ಸಾಮಾಜಿಕ ಕಾಳಜಿಯನ್ನು ಹೊಂದಿದ್ದಾರೆ. ಆರೋಗ್ಯಕರ ಚಿಂತನೆಯನ್ನು ಹೊಂದಿದ್ದಾರೆ. ʼಜೀರೋ ಸೈಜಿನಲ್ಲಿ ಸಿಕ್ಕ ಜೀವʼ ಕವಿತೆ ಸಮಕಾಲೀನ ಸಂಗತಿಯನ್ನು ಉತ್ತಮ ಕವಿತೆಯಾಗಿಸಿರುವುದಕ್ಕೆ ಒಂದು ನಿದರ್ಶನ. ಮಾನವೀಯ ಅಂತಃಕರಣದ ಈ ಕವಿ ʼಬಯಲ ಹೂವುʼನಂತಹ ʼನನಗೂ ಹೆಸರಿಟ್ಟಿದ್ದಾರೆ/ ಅದರಲ್ಲಿ ʼನಾನೇʼ ಇಲ್ಲ/ ಜೀವನದಿಗೆ ಬಣ್ಣ ಬಳಿದ ಹಾಗೆʼ ಎಂದು ಪ್ರತಿಮಾತ್ಮಕವಾಗಿ ಬರೆಯಬಲ್ಲ ಕವಿ. ʼಮೆಲುಕುʼ ಕವಿತೆಯಲ್ಲಿ ವಿಶಾದದ ಧನಿ ಹೊರಡುವಷ್ಟರಲ್ಲಿ ಎಚ್ಚೆತ್ತು ʼಎಲ್ಲಾ ಮಣ್ಣಾದರೂ/ ಹದಾ ಮಾಡಿ ಮತ್ತ ಗೂಡ ಕಟ್ಟಬೇಕಲ್ಲಾʼ ಎಂಬ ಆಶಾವಾದವನ್ನು ಪ್ರಕಟಿಸುತ್ತಾರೆ. ಇದು ಈ ಕವಿಯ ಹೆಚ್ಚುಗಾರಿಕೆ. ಕನ್ನಡ ಕಾವ್ಯ ಲೋಕದಲ್ಲಿ ಹೆಜ್ಜೆಯಿರಿಸಿರುವ ಈ ಕವಿ ಸಾಗಬೇಕಾದ ದಾರಿ ದೂರವಿದೆ. ಅವರಿಗೆ ಶುಭ ಹಾರೈಕೆಗಳು (ತೀರ್ಪುಗಾರರ ಟಿಪ್ಪಣಿ) ಎಲ್.ಸಿ ಸುಮಿತ್ರಾ- ವಿಮರ್ಶಕಿ ಮತ್ತು ಪ್ರಬಂಧಕಾರ್ತಿ.

-೨೦೧೬ನೇ ಸಾಲಿನ ವಿಭಾ ಪ್ರಶಸ್ತಿ ಪುರಸ್ಕೃತ ಕವನ ಸಂಕಲನ 

Related Books