ನಾ ಕಂಡ ರಾಮಾಯಣ- ಲೇಖಕ ಸದಾಶಿವಯೋಗಿ ಅವರ ಕೃತಿ. ಮೂಲ ವಾಲ್ಮೀಕಿಯ ರಾಮಾಯಣ ಒಂದೇ ಆಗಿದ್ದರೂ ಕಾಲಕಾಲಕ್ಕೆ ರಾಮಾಯಣವು ತನ್ನ ಸ್ವರೂಪವನ್ನು ಬದಲಿಸುತ್ತಾ ಹಲವು ರಾಮಾಯಣಗಳಾಗಿ ಇಂದು ಅಸ್ತಿತ್ವದಲ್ಲಿದೆ. ಬೇರೆ ಬೇರೆ ರಾಮಾಯಣಗಳಿದ್ದರೂ ಅದರ ಮೂಲ ಸ್ವರೂಪದಲ್ಲಿ ಬಹಳಷ್ಟು ಬದಲಾವಣೆಯಾಗಿಲ್ಲದಿರುವುದು ಗಮನಾರ್ಹ. ಲೇಖಕರು ತಮ್ಮ ದೃಷ್ಟಿಯಲ್ಲಿ ರಾಮಾಯಣವನ್ನು ಕಂಡು, ಅದರ ಸ್ವರೂಪವನ್ನು, ಆದರ್ಶವನ್ನು, ಇಂದಿನ ಪ್ರಸ್ತುತತೆಯನ್ನು ದಾಖಲಿಸಿದ ಕೃತಿ ಇದು.
(ವಿಮರ್ಶೆ ಜೂನ್ 2013, ಹೊಸತು)
ಮಸ್ತಕದಲ್ಲಿ ಮೂಡುವ ಜ್ಞಾನವೇ ಹಿರಿದು (ಅಮೂರ್ತ), ಪುಸ್ತಕದಲ್ಲಿ ದಾಖಲಾಗುವುದು ನಂತರದಲ್ಲಿ (ಮೂರ್ತ) ಎಂದು ಸದಾಶಿವಯೋಗಿಗಳು ತಿಳಿಸುತ್ತಾರೆ. ಬಾಲ್ಯದಿಂದಲೇ ರಾಮಾಯಣದ ಬಾಹ್ಯರೂಪದ ಕಥೆಯನ್ನು ಸಂದೇಹಿಸುತ್ತಲೇ, ಅಲ್ಲಿ ಹೇಳಲ್ಪಟ್ಟ ಅಂತ ಶೋತವನ್ನು ಅರಿತು ವಿಶಿಷ್ಟ ರೀತಿಯಲ್ಲಿ ಅದನ್ನು ಗ್ರಹಿಸಿದ್ದಾರೆ. ವಾಲ್ಮೀಕಿಯು ತನ್ನ ತಪಸ್ಸಿನ ಫಲವಾದ ಅಮೂರ್ತ ಜ್ಞಾನವೊಂದನ್ನು ಮೂರ್ತರೂಪಕ್ಕೆ ಇಳಿಸಿದಾಗ, ಪ್ರಾಪಂಚಿಕ ಸಂಬಂಧಗಳನ್ನು ಪಾತ್ರಗಳಿಗೆ ಆರೋಪಿಸಿದಾಗ, ಬಾಹ್ಯರೂಪದ ಗ್ರಹಿಕೆಯ ಕಥಾನಕ ಸೃಷ್ಟಿಯಾಯಿತು. ದಶದಿಕ್ಕುಗಳಿಗೂ ಹರಿಯುವ ಮನಸ್ಸನ್ನು ದಶರಥನ ರಾಜವೈಭೋಗದ ದಿಗ್ವಿಜಯದ ಸಂಕೇತವಾಗಿಸಿ, ಸೀತಾ ವಿಯೋಗವೆಂದರೆ ರಾಮನು ನೆಮ್ಮದಿಯನ್ನು ಕಳೆದುಕೊಂಡ ಪಾತ್ರವನ್ನಾಗಿಸಿ, ಇನ್ನುಳಿದ ಕಥಾಪಾತ್ರಗಳನ್ನೂ ಇವರು ವಿಶಿಷ್ಟ ರೀತಿಯಲ್ಲಿ ಅರ್ಥೈಸಿ ವಿಶ್ಲೇಷಿಸಿದ ಪರಿ ಅಚ್ಚರಿಪಡುವಂತಹದಷ್ಟೇ ಅಲ್ಲ; ತಲೆದೂಗುವಂಥದು ಕೂಡ. ಇಲ್ಲಿ ಪ್ರಾಪಂಚಿಕ - ಸಾಂಸಾರಿಕ ಅಪೇಕ್ಷಿತ ಸಿರಿ-ಸಂಪದ ಅಶಾಶ್ವತವೆ೦ದೂ ಶಾಂತಿ ನೆಮ್ಮದಿಯ ಜ್ಞಾನಸಿರಿಯೇ ಶಾಶ್ವತವೆಂಬ ವಿವೇಕ ವಾಣಿಯೊಂದಿದೆ. ರಾಮಾಯಣದ ಬಗ್ಗೆ ಹೊಸ ಆರೋಗ್ಯಕರ ವ್ಯಾಖ್ಯಾನ.
– ಇಂದಿರಾಕುಮಾರ
©2024 Book Brahma Private Limited.