ಕರ್ನಾಟಕ ಸರ್ಕಾರ ಹಾಗೂ ತುಮಕೂರು ವಿಶ್ವವಿದ್ಯಾಲಯದ ಕುಮಾರವ್ಯಾಸ ಕನ್ನಡ ಅಧ್ಯಯನ ಪೀಠದ ಸಹಕಾರದಲ್ಲಿ ಗಣಕ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಎರಡು ಸಂಪುಟಗಳ ಬೃಹತ್ ಗ್ರಂಥಗಳಿವು- ಕುಮಾರವ್ಯಾಸಭಾರತ ಎಂಬ ಕರ್ಣಾಟಭಾರತಕಥಾಮಂಜರಿ (ಸಂಪುಟ 1 ಮತ್ತು 2). ಹಿರಿಯ ವಿದ್ವಾಂಸ ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಅವರು ಸಂಪಾದಿಸಿದ್ದಾರೆ.
ವೇದವ್ಯಾಸರು ರಚಿಸಿದ ಮಹಾಭಾರತವನ್ನು ಕನ್ನಡದ ಭಾಮಿನಿ ಷಟ್ಪದಿಯಲ್ಲಿ ಕುಮಾರವ್ಯಾಸನು (ಗದುಗಿನ ನಾರಾಣಪ್ಪ) ಬರೆದಿದ್ದು, ಈತನು ತನ್ನನ್ನು ತಾನು ಕುಮಾರವ್ಯಾಸ ಎಂದು ಹೇಳಿಕೊಂಡಿದ್ದರ ಹಿನ್ನೆಲೆಯಲ್ಲಿ ಮಹಾಭಾರತವನ್ನು ಈ ಕೃತಿಯನ್ನು ಕುಮಾರವ್ಯಾಸ ಭಾರತ ಎಂದಾಗಿದೆ. ಈ ಕಾವ್ಯಕ್ಕೆ ಕರ್ನಾಟ ಭಾರತ ಕಥಾ ಮಂಜರಿ’ ಎಂದೂ ಹೇಳುವುದುಂಟು. ಮೊದಲ ಭಾಗದಲ್ಲಿ ಒಟ್ಟು 10 ಪರ್ವಗಳಿದ್ದು, 152 ಸಂಧಿಗಳಿವೆ. ಕುಮಾರವ್ಯಾಸನನ್ನು ರೂಪಕ ಚಕ್ರವರ್ತಿ ಎಂದೂ ಹೇಳುತ್ತಾರೆ. ಕುಮಾರವ್ಯಾಸನ ಮಹಾಭಾರತದಲ್ಲಿ ನಿಸರ್ಗದ ವರ್ಣನೆ, ಪಾತ್ರಗಳ ವರ್ಣನೆ, ಸನ್ನಿವೇಶಗಳ ವರ್ಣನೆ ಪ್ರತಿ ಪದವೂ ನವರಸಗಳ ಪೈಕಿ ಒಂದರ ಕೆಲವೊಮ್ಮೆ ಹಲವು ರಸಗಳ ಮಿಶ್ರಣವಾಗಿ ಓದುಗರಿಗೆ ಓದಿನ ಉತ್ಸಾಹವನ್ನು ಇಮ್ಮಡಿಸುತ್ತದೆ. "ಮಹತ್ತಿನೊಡನೆ ಜನಪ್ರಿಯತೆಯನ್ನೂ ಪಡೆದಿರುವ ವಿರಳ ಸಂಯೋಗವುಳ್ಳ ಕವಿಗಳಲ್ಲಿ ಈತ ಅಗ್ರಗಣ್ಯನು. ಕಲಿಯದವರಿಗೂ ಕಾಮಧೇನುವಾಗಿ ಕನ್ನಡ ನಾಡಿನ ಹೃದಯವೇದಿಕೆಯಲ್ಲಿ ಅಗ್ರಸ್ಥಾನ ಪಡೆದ ಮಹಾಧ್ಯಕ್ಷನಾಗಿದ್ದಾನೆ" ಎಂದು ಕವಿ ಕುವೆಂಪು ಅಭಿಪ್ರಾಯಪಟ್ಟಿದ್ದು, ಅತಿಶಯೋಕ್ತಿಯಲ್ಲ. ಮಹಾಭಾರತವನ್ನು ಕೇವಲ ಕಥೆಯಾಗಿ ಮಾತ್ರವಲ್ಲ; ಎಲ್ಲ ರಸಗಳ ಸಂಗಮವಾಗಿಸಿ ಕವಿ ಕುಮಾರವ್ಯಾಸ, ಕನ್ನಡ ಪ್ರಾಚೀನ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದರ ಪೈಕಿ ಈ ಕೃತಿ ಅತ್ಯಂತ ಮಹತ್ವದ್ದು.
ಕುಮಾರವ್ಯಾಸ ಭಾರತ ಎಂಬ ಪರಿಷ್ಕೃತ ಪಠ್ಯವನ್ನು, ಹೊಸಗನ್ನಡ, ಗದ್ಯಾನುವಾದ, ಕ್ಲಷ್ಟಪದಗಳ ಅರ್ಥ, ಟಿಪ್ಪಣಿಗಳು, ವಿಶೇಷ ವಿಷಯಗಳು, ಪರಾಮರ್ಶನ ಸಾಹಿತ್ಯ, ಪದ್ಯಗ:ಳ ಅಕಾರಾದಿಯ ಶಿಸ್ತು ಈ ಕೃತಿಯ ವೈಶಿಷ್ಟ್ಯ. ಭೀಷ್ಮಪರ್ವ, ದ್ರೋಣಪರ್ವ, ಶಲ್ಯಪರ್ವ ಹಾಗೂ ಗದಾಪರ್ವ ಹೀಗೆ ಈ ನಾಲ್ಕು ಪರ್ವಗಳ ಕಥೆಯನ್ನು ಓಳಗೊಂಡಿದೆ.
©2024 Book Brahma Private Limited.