ಬೊಗಸೆ ತುಂಬ ಹೂವು ಕೆ. ಎನ್ ಮಹಾಬಲ ಕವನಸಂಕಲವಾಗಿದೆ. ಹೂವು ಮೃದುತ್ವದ ಪ್ರತೀಕ, ಪರಿಮಳದ ಆಗರ, ಚೆಲುವಿನ ರೂಪಕ. ಹೂವು ಮನಸಿನ ಸೂಚಕ, ಹೊಸತನದ ಮೆಲುನಗೆ, ಹೂವು ಭಾವಗಳ ಬಿಂಬ ಆದರೆ ಇಲ್ಲಿ ಹೂವು ಬೊಗಸೆದುಂಬಿ ಅರಳಿ ಸುನೀತವೂ ಆಗಿರುವ ಪದಗಳ ಸಾಲು ಸಾಲು. ಮಹಾಬಲರೆಂಬ ಭಾವಜೀವಿ ಕವಿಯ ಮನಮಂಥನದ ಹರಿವು. ಅವು ಇಲ್ಲಿ ಈ ಪುಸ್ತಕದಲ್ಲಿ ನಮ್ಮ ಕೈಗೆಟುಕುತ್ತಿವೆ. ಅದೇ 'ಬೊಗಸೆ ತುಂಬ ಹೂವು' ಕನ್ನಡದ ಸುನೀತಗಳ ಗುಚ್ಛ. ಸಾನೆಟ್ ಸುನೀತ ಎಂದೊಡನೆ ನಮ್ಮ ಮನಸ್ಸಿನಲ್ಲಿ ಮೊತ್ತ ಮೊದಲು ಮೂಡುವ ಚಿತ್ರ ಶೇಕ್ಸ್ ಪಿಯರ್ ನದು! ಏಕೆಂದರೆ ಅವನ ಹೆಸರು ಮತ್ತು ಲೇಖನಿಗಳು ಸಾನೆಟ್ ಗಳಿಗಾಗಿಯೂ ಅವನ ಪ್ರಸಿದ್ಧ ನಾಟಕಗಳಷ್ಟೇ ನಮಗೆ ಚಿರಪರಿಚಿತ. ಸಾಮ್ರಾಜ್ಞಿ ಮೊದಲನೆಯ ಎಲಿಜಬೆತ್ ಳ ಸಮಯ. ರೆನೆಸಾನ್ಸ್ ಕಾಲ ಅದು, ಇಂಗ್ಲಿಷ್ ಕಾವ್ಯದ ಅಸ್ತಿತ್ವಕ್ಕೆ ಹೊಸ ಆಯಾಮವನ್ನೇ ಬರೆದಿತ್ತು. ಹಾಗೆ ಪ್ರಮುಖವಾಗಿ ನಾಟಕಕಾರನಾಗಿದ್ದರೂ ಶೇಕ್ಸ್ ಪಿಯರನ ಸಾನೆಟ್ ಗಳಿಗೂ ಪ್ರಪಂಚದಾದ್ಯಂತ ಪ್ರೀತಿ ಲಭಿಸಿದ್ದು ಸುಳ್ಳಲ್ಲ. ಸಾನೆಟ್ ರಚನೆಗೆ ಇರುವ ನಿಯಮಗಳು ಕೆಲವಿವೆ. ಹದಿನಾಲ್ಕು ಸಾಲುಗಳು, ಸಾಮಾನ್ಯವಾಗಿ ಕೊನೆಯ ಎರಡು ಸಾಲುಗಳೇ ಇಡೀ ಪದ್ಯದ ಜೀವಾಳ. ಸುನೀತಗಳಲ್ಲಿ ಸಾಲುಗಳ ವ್ಯತ್ಯಾಸ ಹೊಂದಿರುವ ವಿಧಗಳೂ ಉಂಟು.ಆದರೂ ಅದರ ಮುಖ್ಯ ಗುಣ ಒಂದು ಕರಾರುವಾಕ್ ಬಂಧವನ್ನು ಆದರಿಸಿದೆ. ಆ ಬಂಧದ ಒಳಗೇ ಭಾವ,ಅರ್ಥ, ಲಯ, ಪ್ರಾಸಗಳು ಸರಳ ಪದಗಳ ಮೂಲಕ ವ್ಯಕ್ತವಾಗಬೇಕು. ನಮ್ಮ ಹೆಮ್ಮೆಯ ಕವಿಗಡಣದ ಕವಿಗಳಾದ ಬೇಂದ್ರೆ ಯವರು, ಕುವೆಂಪು,ನಿಸಾರ್ ಅಹ್ಮದ್,ಗೋವಿಂದ ಪೈ,ಎಚ್ಚೆಸ್ವಿ, ರಾಮಚಂದ್ರ ಶರ್ಮ,ವೇಣುಗೋಪಾಲ ಸೊರಬ ಮುಂತಾದವರೆಲ್ಲರೂ ವಿಭಿನ್ನ ಬಗೆಯ ಸುನೀತಗಳನ್ನು ರಚಿಸಿದ್ದಾರೆ.
©2024 Book Brahma Private Limited.