ಲೇಖಕ ಮಾಧವ ಚಿಪ್ಪಳಿ ಅವರ ಅನುವಾದಿತ ಕೃತಿ ʻಯೂರಿಪಿಡೀಸ್ ಮೂರು ನಾಟಕಗಳುʼ. ʻಯೂರಿಪಿಡೀಸ್ʼ ಗ್ರೀಕ್ನ ಮಹಾನ್ ದುರಂತ ಕವಿಗಳಾದ ಸೊಫೊಕ್ಲಿಸ್ ಮತ್ತು ಎಸ್ಕೈಲಸ್ ಅವರಲ್ಲಿ ಒಬ್ಬರು. ಜೀವನದುದ್ದಕ್ಕೂ ಓದು, ಬರಹಗಳಲ್ಲಿ ತಲ್ಲೀನನಾಗಿದ್ದ ಇವರು ಗ್ರೀಸ್ನ ಎಲ್ಲಕ್ಕಿಂತ ದೊಡ್ಡ ಖಾಸಗಿ ಗ್ರಂಥಾಲಯವನ್ನು ಹೊಂದಿದ್ದರು. ಇವರು ಬರೆದ ನಾಟಕಗಳಲ್ಲಿ ಅಲ್ಸೆಸ್ಟಿಸ್, ಔಲಿಸ್ನಲ್ಲಿ ಇಫಿಜೀನಿಯಾ ಹಾಗೂ ಮೀಡಿಯಾ ಎಂಬ ಮೂರನ್ನು ಆಯ್ಕೆ ಮಾಡಿ ಮಾಧವ ಚಿಪ್ಪಳಿ ಅವರು ಕನ್ನಡಕ್ಕೆ ತಂದಿದ್ದಾರೆ. ಪುಸ್ತಕದ ಬಗ್ಗೆ ಲೇಖಕ ಅಕ್ಷರ ಕೆ.ವಿ., “ಪ್ರಾಚೀನ ಗ್ರೀಕ್ ನಾಟಕಕೃತಿಗಳು ಪಾಶ್ಚಿಮಾತ್ಯ ರಂಗಭೂಮಿಯ ಮುಕುಟಮಣಿಗಳು ಮಾತ್ರವಲ್ಲ ಅನ್ಯಸಂಸ್ಕೃತಿಯ ಹಲ್ಲುಗಳಿಗೆ ಕಷ್ಟ ಕೊಡುವ ಕಬ್ಬಿಣದ ಕಡಲೆಗಳೂ ಹೌದು. ಅನುವಾದದಿಂದ ತೊಡಗಿ ರಂಗಪ್ರಯೋಗದವರೆಗೂ ಇವು ಅಸಾಮಾನ್ಯ ಸವಾಲುಗಳನ್ನೊಡ್ಡುತ್ತವೆ. ಅಂಥ ಸವಾಲುಗಳನ್ನೆದುರಿಸುತ್ತ ಇಂಗ್ಲೀಷಿನಂಥ ಜಾಗತಿಕ ಭಾಷೆಯೂ ಆಗಾಗ ಆ ನಾಟಕಗಳ ಹೊಸ ಅನುವಾದಗಳನ್ನೂ ರಂಗಪ್ರಯೋಗಗಳನ್ನೂ ಮಾಡಿಕೊಳ್ಳುತ್ತ ಬಂದಿದೆ. ಈ ಸಂಕಲನವು ಇವತ್ತಿನ ಕನ್ನಡದ ಸಂದರ್ಭದಲ್ಲಿ ಕಾಲೂರಿಕೊಂಡು ಅಂಥ ಅನುಸಂಧಾನದ ಸವಾಲನ್ನು ಮೈಮೇಲೆ ಎಳೆದುಕೊಂಡಿದೆ. ಇದುವರೆಗೂ ಕನ್ನಡದಲ್ಲಿ ಬಂದಿರುವ ಗ್ರೀಕ್ ನಾಟಕ ಅನುವಾದಗಳಿಗಿಂತ ಭಿನ್ನವಾಗಿ, ಪ್ರಸ್ತುತ ಭಾಷಾಂತರವು ಅಲ್ಲಲ್ಲಿ ಛಂದೋಬದ್ಧ ಲಯಗಳನ್ನು ಬಳಸುವ ಪ್ರಯೋಗ ಮಾಡಿದೆ; ಆಡುಮಾತಿಗೆ ಹತ್ತಿರವಿರುವ ಹೊಸಗನ್ನಡದೊಳಗೂ ಕಾವ್ಯದ ಧ್ವನಿಯನ್ನು ಕಟ್ಟಲು ಪ್ರಯತ್ನಿಸಿದೆ. ಇಂಥ ಕ್ರಿಯಾಶೀಲ ಆಮದು ವ್ಯಾಪಾರವು ಹೊರನಾಡಿನ ಹೊಸತನವನ್ನು ಅರಿಯಲಿಕ್ಕೆ ಮಾತ್ರವಲ್ಲ, ಸ್ವದೇಶದ ಸ್ವಂತಿಕೆಯನ್ನು ಕಾಣಿಸಿಕೊಡಲೂ ತುಂಬ ಉಪಯುಕ್ತ” ಎಂದು ಹೇಳಿದ್ದಾರೆ.
©2024 Book Brahma Private Limited.