ಮಹೇಶ ಎಲಕುಂಚವಾರ ಅವರು ಮರಾಠಿ ಭಾಷೆಯ ಪ್ರಮುಖ ನಾಟಕಕಾರರಲ್ಲಿ ಒಬ್ಬರು. ಪ್ರತಿಬಿಂಬ, ಚಿರೆಬಂದಿವಾಡೆ, ಪಾರ್ಟಿ, ಸುಲ್ತಾನ ಮತ್ತು ಯುಗಾಂತ ಇವರ ಪ್ರಸಿದ್ದ ನಾಟಕಗಳು. ಮಹೇಶ ಅವರ ಸೋನಾಟ, ಧರ್ಮಪತ್ರ ಮತ್ತು ವಾಸಾಂಸಿ ಜೀರ್ಣಾನಿ ಎಂಬ ಮೂರು ನಾಟಕಗಳನ್ನು ಕನ್ನಡದ ಪ್ರಮುಖ ನಾಟಕಕಾರರಾದ ಗಿರೀಶ ಕಾರ್ನಾಡ ಅನುವಾದಿಸಿದ್ದಾರೆ.
ಮಹಾರಾಷ್ಟ್ರದ ಪರ್ವಾದಲ್ಲಿ 9 ಅಕ್ಟೋಬರ್ 1939ರಂದು ಜನಿಸಿದ ಮಹೇಶ ಅವರು ನಾಲ್ಕನೆಯ ವರ್ಷದಲ್ಲೇ ತಂದೆ-ತಾಯಿಗಳಿಂದ ದೂರವಾಗಿ ಶಿಕ್ಷಣಕ್ಕಾಗಿ ಪಟ್ಟಣ ಸೇರಿ ಏಕಾಂಗಿಯಾಗಿ ಬೆಳೆದರು. ನಾಗಪುರದಲ್ಲಿ ಮ್ಯಾಟ್ರಿಕುಲೇಶನ ಮುಗಿಸಿ, ಮೊರಿಸ್ ಕಾಲೇಜಿನಲ್ಲಿ ಬಿ.ಎ., ನಾಗಪುರ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. 1965ರಲ್ಲಿ ಸಿನೇಮಾ ನೋಡಲೆಂದು ಹೋದವರು ಟಿಕೆಟ್ ಸಿಗದೆ ನಾಟಕವನ್ನು ವೀಕ್ಷಿಸಿದರು. ವಿಜಯಾ ಮೆಹತಾ ನಿರ್ದೇಶಿಸಿದ ವಿಜಯ ತೆಂಡೂಲ್ಕರ ಅವರ 'ನಾನು ಗೆದ್ದೆ. ನಾನು ಸೋತೆ' ಎಂಬ ನಾಟಕ ವೀಕ್ಷಿಸಿದ ಮೇಲೆ ನಾಟಕಕಾರನಾಗುವ ನಿರ್ಧಾರ ಕೈಗೊಂಡರು. ಮಹೇಶ ಎಲಕುಂಚವಾರ ಅವರು ಮರಾಠಿಯಲ್ಲಿ ಅನೇಕ ನಾಟಕಗಳನ್ನು ಬರೆದಿದ್ದಾರೆ. ನಂತರ ಅವು ಅನೇಕ ಭಾರತೀಯ ಮತ್ತು ವಿದೇಶೀ ಭಾಷೆಗಳಲ್ಲಿ (ಇಂಗ್ಲಿಷ್, ಫ್ರೆಂಚ್, ಜರ್ಮನ್ ಇತ್ಯಾದಿ) ಭಾಷಾತರಗೊಂಡಿವೆ.
ನಾಗಪುರ ಧರ್ಮಪೀಠ ಆರ್ಟ್ಸ್ ಮತ್ತು ಕಾಮರ್ಸ್ ಕಾಲೇಜಿನಲ್ಲಿ ಮತ್ತು ಪಿ.ಡಿಯೋ ಮೆಮೊರಿಯಲ್ ಸೈನ್ಸ್ ಕಾಲೇಜದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಬೋಧಿಸುತ್ತ ನಿವೃತ್ತಿಗೊಂಡರು. ಪುಣೆಯ ಫಿಲ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟನಲ್ಲಿ ೨೦೦-೨೦೦೧ರಲ್ಲಿ Screen Play Writing ದ ಪ್ರಾಧ್ಯಾಪಕರಾಗಿ ಹಾಗೂ ದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಆನೇಕ ವರ್ಷ ಸೇವೆ ಸಲ್ಲಿಸಿದ್ದಾರೆ. -
©2024 Book Brahma Private Limited.