ರಾಯಪ್ಪ ಪತ್ತಾರ ಅವರ ಮೂಲ ಕನ್ನಡ ನಾಟಕ ‘ಸಂಗ್ಯಾ-ಬಾಳ್ಯಾ’ವನ್ನು ಲೇಖಕ ಪ್ರೊ. ಬಸವರಾಜ ನಾಯ್ಕರ್ ಅವರು ಇಂಗ್ಲಿಷಿಗೆ ಅನುವಾದಿಸಿದ ಕೃತಿ-ಸಂಗ್ಯಾ-ಬಾಳ್ಯಾ ಬಿಟ್ರಯಲ್. ಸಂಗ್ಯಾ-ಬಾಳ್ಯಾ ಇಬ್ಬರು ಸ್ನೇಹಿತರು. ವೀರಭದ್ರ ಎಂಬಾತನ ಪತ್ನಿಯೊಂದಿಗೆ ಸಂಗ್ಯಾನ ಅನೈತಿಕ ಸಂಬಂಧವಿರುತ್ತದೆ. ಇದನ್ನು ತಿಳಿದ ವೀರಭದ್ರ ಆ ವಂಚಕರನ್ನು ಕೊಲೆ ಮಾಡುತ್ತಾನೆ. ನಂತರ, ವೀರಭದ್ರನು ತನ್ನ ಪತ್ನಿ ಗಂಗಾಳನ್ನು ತವರು ಮನೆಗೆ ಕಳುಹಿಸುತ್ತಾನೆ. ಬ್ರಿಟಿಷ್ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ತಾನು ಸಿದ್ಧನಿರುವುದಾಗಿ ಹೇಳಿದ ಮೇಲೆ, ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ನಂತರ, ಆತನು ಶಿಕ್ಷೆಯಿಂದ ಕ್ಷಮಾರ್ಹನಾಗುತ್ತಾನೆ.
ಸಂಗ್ಯಾ-ಬಾಳ್ಯಾ ಜನಪದ ನಾಟಕವು ಕನ್ನಡ ಸಾಹಿತ್ಯದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಜನಜನಿತವಾಗಿದೆ. ಜನಪದ ಸಾಹಿತ್ಯ ಸೊಗಡಿನ ನಾಟಕವನ್ನು ಲೇಖಕರು ಇಂಗ್ಲಿಷಿಗೆ ಅನುವಾದಿಸಿ ಜಾಗತಿಕ ಮೌಲ್ಯವನ್ನು ತಂದುಕೊಟ್ಟಿದ್ದಾರೆ. ಇಂತಹ ಅನೈತಿಕ ಸಂಬಂಧದ ವಿಷಯ ವಸ್ತುವಿನಿಂದ ಉಂಟಾದ ದ್ವೇಷ, ರಕ್ತಪಾತ, ಭೀಕರತೆಯ ಈ ನಾಟಕದ ದುರಂತವನ್ನು ಇಂಗ್ಲೆಂಡಿನ ರಾಣಿ ಎಲಿಜಬೆತ್ ಬದುಕಿನ ಕಥೆಗೂ ಹೋಲಿಸಲಾಗುತ್ತದೆ. ಭಾರತೀಯ ಆಂಗ್ಲ ಸಾಹಿತ್ಯದಲ್ಲಿ ಈ ಕೃತಿಯು ವಿಮರ್ಶಕರ ಗಮನ ಸೆಳೆದಿದೆ.
ಕೇವಲ ಸಂಭಾಷಣೆ ಮಾತ್ರವಾಗಿರದೇ, ಹಾಡುಗಳು-ಕುಣಿತಗಳಿರುವುದು ಈ ನಾಟಕದ ವೈಶಿಷ್ಟ್ಯ. ಅನುವಾದಿತ ಈ ಇಂಗ್ಲಿಷ್ ಕೃತಿಯು ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ. ವಿದ್ಯಾರ್ಥಿಗಳಿಗೆ ಆರು ವರ್ಷ ಕಾಲ ಪಠ್ಯವಾಗಿತ್ತು.
©2024 Book Brahma Private Limited.