ಚಿಂತಕ ಯೋಗೇಶ್ ಮಾಸ್ಟರ್ ಅವರ ’ಏಕವ್ಯಕ್ತಿ ಪ್ರದರ್ಶನಗಳು’ ಕೃತಿಯು ನಾಟಕ ಪ್ರಕಾರವಾಗಿದೆ. ಈ ಕೃತಿಯಲ್ಲಿ 4 ಶೀರ್ಷಿಕೆಗಳಿದ್ದು, ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ, ಪ್ರಶ್ನೇಶ್ವರ ಉತ್ತರೇಶ್ವರ, ಒಂದೇ ಒಂದು ಪ್ರಶ್ನೆ, ಕೊನೆಯ ಅಂಕ ಪ್ರಕಾರಗಳನ್ನು ಒಳಗೊಂಡಿದೆ. ರವೀಂದ್ರ ಟ್ಯಾಗೋರ್ ಮೂಲಕತೆ ಆಧಾರಿತ ಒಂದಾನೊಂದು ಕಾಲದಲ್ಲಿ ಒಬ್ಬರಾಜ ಇದ್ದ ಕತೆಯು ಇಲ್ಲಿ ಯೋಗೇಶ್ ಮಾಸ್ಟರ್ ಅವರಿಂದ ರಂಗ ರೂಪಾಂತರಗೊಂಡಿದೆ. ಮಕ್ಕಳ ಸಹಜ ಮುಗ್ಧತೆಯನ್ನು ಪಂಡಿತರ ಪಾಂಡಿತ್ಯವನ್ನು ತೂಗಿ ನೋಡುವ ಕತೆಗಾರ ಈ ರಂಗದಲ್ಲಿದ್ದು, ಮಗುವು ತಾನು ಕೇಳುವ ಕತೆಗಳಲ್ಲಿ ಹೊಂದುವ ತಾದಾತ್ಮ್ಯತೆಯನ್ನು ಮತ್ತು ಅದರ ಮೌಲ್ಯವನ್ನು ಅನಾವರಣ ಮಾಡುತ್ತಾ ಹೋಗುತ್ತದೆ .
ಪ್ರಶ್ನೇಶ್ವರ ಉತ್ತರೇಶ್ವರ ರಂಗವು ಹರಿಕಥೆಯಂತಹ ಕೀರ್ತನಾ ಶೈಲಿಯನ್ನು ಹೊಂದಿದ್ದು ಈ ಪ್ರಸಂಗದಲ್ಲಿ ಮಗುವು ತನ್ನ ಮುಗ್ಧತೆಯಿಂದ ಹುಟ್ಟುವ ಪ್ರಶ್ನೆಗಳನ್ನು ಹಿರಿಯರಲ್ಲಿ ತೆರೆದಿಟ್ಟಾಗ ಉಂಟಾಗುವ ಗೊಂದಲ ಮತ್ತು ಗೋಜಲುಗಳನ್ನು ಹಾಸ್ಯಮಯ ರೂಪಕದಲ್ಲಿ ಕಟ್ಟಿಕೊಡುತ್ತದೆ. ಒಂದೇ ಒಂದು ಪ್ರಶ್ನೆ- ಅಲೆಅಲೆಯಾಗಿ ಬರುವ ಪ್ರಶ್ನೆಗಳಿಗೆ ಎಂದಿಗೂ ವ್ಯವಸ್ಥಿತ ಸಮಾಜದಲ್ಲಿ ಉತ್ತರಗಳನ್ನು ಪಡೆಯದೇ ಕೊನೆಗೆ ಪ್ರಶ್ನೆಗಳೇ ಹುಟ್ಟಿದ ಸ್ಥಿತಿಗೆ ತಲುಪುತ್ತದೆ ಎನ್ನುವುದನ್ನು ವಿಶ್ಮೇಷಿಸಿದ್ದಾರೆ.
ಕೊನೆಯ ಅಂಕ -ಶೀರ್ಷಿಕೆಯೂ ಮಗುವಿನ ಬಾಲ್ಯದ ದಿನಗಳೇ ವ್ಯಕ್ತಿಯ ಭವಿಷ್ಯದಲ್ಲಿ ಪ್ರತಿಫಲಿಸುವುದು ಎಂಬುದನ್ನು ತಿಳಿಸುತ್ತದೆ. ಯಾವುದೇ ವ್ಯಕ್ತಿಯು ತನ್ನ ಬಾಲ್ಯದಲ್ಲಿ ಅನುಭವಿಸಿದ ನೋವುಗಳನ್ನು ಜಾಗೃತಾವಸ್ಥೆಯಲ್ಲಿ ಮರೆತಿದ್ದರೂ, ಅದು ಸುಪ್ತಪ್ರಜ್ಞಾವಸ್ಥೆಯಲ್ಲಿ ಜೀವಂತವಾಗಿರುತ್ತದೆ ಮತ್ತು ವ್ಯಕ್ತಿತ್ವದ ಮೇಲೆ ತನ್ನ ಪ್ರಭಾವವನ್ನು ಬೀರುತ್ತಿರುತ್ತದೆ. ಅಸಹಾಯಕ ಸ್ಥಿತಿಯಲ್ಲಿರುವ ಮಕ್ಕಳನ್ನು ತಮ್ಮ ಇಚ್ಛೆಯಂತೆ ನಡೆಸಿಕೊಳ್ಳುವ ಹಿರಿಯರಿಗೆ ಮುಂದೊಂದು ದಿನ ತಾವೂ ಅದೇ ಅಸಹಾಯಕ ಸ್ಥಿತಿಯಲ್ಲಿ ಅವರಿಗೆ ಒದಗುತ್ತೇವೆ ಎಂಬುದರ ಅರಿವು ಮೂಡಿಸುತ್ತದೆ.
©2024 Book Brahma Private Limited.