ಶ್ರೇಷ್ಠವಾದ ಪ್ರಹಸನಗಳು ವಾಸ್ತವದಲ್ಲಿರುವ ಅಸಂಬದ್ಧತೆಯನ್ನೂ, ಅಸಂಬದ್ಧತೆಯಲ್ಲಿರುವ ವಾಸ್ತವವನ್ನೂ, ಭಯಾನಕದಲ್ಲಿರುವ ಹಾಸ್ಯವನ್ನೂ, ಹಾಸ್ಯದಲ್ಲಿರುವ ಭಯಾನಕವನ್ನೂ ಕಾಣಿಸುತ್ತವೆ- ಎಂದೊಬ್ಬ ವಿಮರ್ಶಕ ಹೇಳುತ್ತಾನೆ. ‘ಸಾಹೇಬರು ಬರುತ್ತಾರೆ’ ಈ ಗುಣಗಳಿರುವಂತಹ ಒಂದು ಪ್ರಹಸನ. ಒಂದು ಸಾಧಾರಣ ಪೇಟೆಯ ವಾಸ್ತವವನ್ನು ಈ ನಾಟಕ ಚಿತ್ರಿಸುತ್ತದೆ. ಜತೆಗೇ ಆ ಜನರ ಅಂತಸ್ತಿನ ಕಲ್ಪನೆಯ ಅಸಂಬದ್ಧತೆಯನ್ನು ಸೂಚಿಸುತ್ತದೆ. ಅಧಿಕಾರದ ಬಗ್ಗೆ ಅವರಿಗಿರುವ ಭಯವನ್ನೂ ಕಾಣೀಸುತ್ತಲೇ ಆ ಭಯದಲ್ಲಿ ಅವರು ಸಿಕ್ಕಿ ಒದ್ದಾಡುವ ಹಾಸ್ಯಾಸ್ಪದ ಪ್ರಸಂಗಗಳನ್ನು ಚಿತ್ರಿಸುತ್ತದೆ.
ಪ್ರಹಸನ ಪ್ರಕಾರಕ್ಕೆ ಲಭ್ಯವಾಗುವ ಎಲ್ಲ ತಂತ್ರಗಳನ್ನೂ ಈ ನಾಟಕ ಬಳಸಿಕೊಳ್ಳುತ್ತದೆ- ಯಾವನೋ ಒಬ್ಬನನ್ನು ಇನ್ನೊಬ್ಬ ಎಂದು ಭಾವಿಸಿ ಗೊಂದಲಪಡುವ ವ್ಯಕ್ತಿವ್ಯತ್ಯಾಸ ಪ್ರಹಸನ: ತಾನಲ್ಲದ್ದನ್ನು ತಾನು ಎಂದು ತೋರಿಸುವ ಆರೋಪಿತ ನಡಾವಳಿಗಳ ಪ್ರಹಸನ: ಸಂದರ್ಭದ ಇಕ್ಕಟ್ಟಿನಲ್ಲಿ ಸಿಕ್ಕುಬಿದ್ದು ಹೊರಬರಲಾಗದೆ ಒದ್ದಾಡುವ ಸನ್ನಿವೇಶ ಪ್ರಹಸನ ಮತ್ತು ಸಾಮಾಜಿಕ ಅಂತಸ್ತಿನ ಮುಖವಾಡಗಳಲ್ಲಿ ಮನುಷ್ಯ ಮನುಷ್ಯನನ್ನು ಗುರುತಿಸಲಾಗದೆ ಹೋಗುವ ಬೌದ್ಧಿಕ ಪ್ರಹಸನ- ಇವಿಷ್ಟೂ ಈ ನಾಟಕದಲ್ಲಿ ಕೂಡಿಕೊಂಡಿವೆ. ಹಾಗಾಗಿಯೇ ಈ ನಾಟಕ ಹೊರಗಿಂದ ಬಂದು ಮಂಕುಬೂದಿ ಎರಚಿದ ಒಬ್ಬ ಲಫಂಗನ ಕಥೆಯಷ್ಟೇ ಆಗುವುದಿಲ್ಲ ಅಥವಾ ಕಥೆಯೂ ಆಗುವುದಿಲ್ಲ. ಬದಲು, ಇದು ಹಣ-ಅಂತಸ್ತು-ಅಧಿಕಾರಗಳ ಬೆನ್ನುಹತ್ತಿ ಸುಳ್ಳುಗಳ ಸರಮಾಲೆಯನ್ನೇ ತನ್ನ ಸುತ್ತ ಹೆಣೆದುಕೊಂಡಿರುವ ಮುಖವಾಡ ವ್ಯವಸ್ಥೆಗೆ ಮಿಂಚು ಹೊಡೆಸುವ ಕಥೆಯಾಗುತ್ತದೆ.
©2024 Book Brahma Private Limited.