ಇತಿಹಾಸದ ಪ್ರಸಂಗವೊಂದನ್ನು ಮುಂದಿಟ್ಟುಕೊಂಡು ಇಂದಿನ ಭಾರತೀಯರ ಮನಸ್ಥಿತಿಯನ್ನು ವ್ಯಂಗ್ಯವಾಡುವ ಪ್ರಯತ್ನವನ್ನು ನಾಟಕಕಾರರು ಈ ಕೃತಿಯಲ್ಲಿ ಮಾಡಿದ್ದಾರೆ. ಚಿತ್ರದಲ್ಲಿ ಇತಿಹಾಸದ ಒಂದು ಸಣ್ಣ ಎಳೆಯಿದೆ. ತನ್ನ ಗಂಡ ದೇಶದ್ರೋಹವನ್ನು ಮಾಡಿ ಶತ್ರುಗಳ ಜೊತೆ ಕೈ ಜೋಡಿಸಿದಾಗ, ಪತ್ನಿ ಹೊನ್ನವ್ವ ಆತನ ಊಟದಲ್ಲಿ ವಿಷ ಇಕ್ಕಿ, ತಾನೂ ವಿಷ ಉಂಡು ಸಾಯುವುದು. ಈ ದೇಶಪ್ರೇಮದ ಕತೆಯನ್ನು ಮುಂದಿಟ್ಟುಕೊಂಡು ಇಂದಿನ ದೇಶದ ವರ್ತಮಾನವನ್ನು ಚರ್ಚಿಸುವುದು. ರಾಷ್ಟ್ರೀಯತೆಯ ಆಶಯವೂ ಇದರಲ್ಲಿದೆ. ಅಂತೆಯೇ ಪ್ರಜಾಪ್ರಭುತ್ವವನ್ನು ಅಲ್ಲಲ್ಲಿ ವ್ಯಂಗ್ಯ ಮಾಡುತ್ತದೆ. ಸುಭಾಶ್ ಚಂದ್ರಬೋಸ್, ಭಗತ್ ಸಿಂಗ್‌ರಂತಹ ವ್ಯಕ್ತಿತ್ವಕ್ಕಾಗಿ ನಾಟಕಕಾರರು ಹಪಹಪಿಸುತ್ತಾರೆ. ಆದರೆ ಈ ದೇಶದ ಮೂಲಭೂತ ಸಾಮಾಜಿಕ ಸಮಸ್ಯೆಗಳ ಕಡೆಗೆ ಕಣ್ಣಾಯಿಸುವುದಿಲ್ಲ. ಆದುದರಿಂದ ಇದೊಂದು ರೀತಿಯ ರಾಜಕೀಯ ನಾಟಕವೇ ಸರಿ. ಜಾತೀಯತೆ, ರೈತರ ಸಮಸ್ಯೆ, ಕೃಷಿಯ ಪತನ, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಸೋಗಲಾಡಿತನ ಇವುಗಳೆಲ್ಲವೂ ದೇಶಪ್ರೇಮಕ್ಕಿರುವ ಅಡೆತಡೆಗಳು ಎನ್ನುವ ಆಳದ ನೋಟ ಈ ನಾಟಕದಲ್ಲಿಲ್ಲ. ಭಾವಾವೇಶಕ್ಕೊಳಗಾಗಿರುವ ಜನಪ್ರಿಯ ಆದರ್ಶವೇ ನಾಟಕಕಾರರ ಮುಖ್ಯ ಉದ್ದೇಶವಾಗಿದೆ.
©2024 Book Brahma Private Limited.