ಸಂಸ್ಕೃತ ’ಕಾವ್ಯ ಮೀಮಾಂಸೆ’ಯಲ್ಲಿ ಪ್ರಮುಖ ರಸ ಸಿದ್ಧಾಂತ ಮಂಡಿಸುವ ಪಂಡಿತ ಜಗನ್ನಾಥ ’ಗಂಗಾಲಹರಿ’ಯಂತಹ ಕಾವ್ಯದ ಕವಿಯೂ ಹೌದು. ಪಂಡಿತರಾಜ ಜಗನ್ನಾಥನ ಪ್ರೇಮ, ಮೊಗಲ್ ರಾಜಕೀಯ, ದಾರಾನ ಪ್ರೀತಿ- ಔರಂಗಜೇಬನ ದ್ವೇಷ, ಸಹ ವಿದ್ವಾಂಸರ ಅಸಹನೆಗಳನ್ನು ಒಳಗೊಂಡ ಸೊಗಸಾದ ನಾಟಕವಿದು. ಕವಿ-ವಿಮರ್ಶಕ ವಿಕ್ರಮ ವಿಸಾಜಿ ಅದನ್ನು ನಾಟಕಕ್ಕೆ ಅಳವಡಿಸಿದ್ದಾರೆ. ಕಾವ್ಯಾತ್ಮಕ ಸಾಲುಗಳು ನಾಟಕದ ಓದನ್ನು ಸಹ್ಯಗೊಳಿಸುತ್ತವೆ. ನಾಟಕದ ಬಗ್ಗೆ ವಿ.ಎಂ. ಮಂಜುನಾಥ ’ಮೊಗಲ್ ಯುಗದ ನಾಟಕ ’ರಸಗಂಗಾಧರ’ದೊಳಗಿನ ಕಾವ್ಯಾತ್ಮಕ ಭಾಷೆಯ ಬೇಟೆಯಲ್ಲಿ ನುಗ್ಗಿದ ರೂಪಕಗಳ ಗೂಳಿ ಪ್ರೇಮದ ಆಕಾರದಲ್ಲಿ ಉರಿದುರಿದು ಬೂದಿಯಾಗುವುದು ಅಥವಾ ರಣಕೆಂಡವಾಗುವುದರ ದಿಟ್ಟರೂಪ ಇಲ್ಲಿದೆ. ವಿಕ್ರಮ ವಿಸಾಜಿ ಅವರ ನಾಟಕ ಕೃತಿ ಜೀವಂತವಾಗುವುದು ಹೀಗೆ’ ಎಂದು ಬರೆದರೆ ಹಿರಿಯ ಕವಿ ಎಚ್.ಎಸ್. ಶಿವಪ್ರಕಾಶ ಅವರು ’ಆಧುನಿಕ ಕನ್ನಡ ನಾಟಕಗಳ ಪರಂಪರೆಯಲ್ಲಿ ಪ್ರೇಮದ ವಸ್ತು ಇಲ್ಲವೇ ಇಲ್ಲ’ ಎನ್ನುವಷ್ಟು ವಿರಳ. ಈ ಕೊರತೆಯನ್ನು ನೀಗಿಸುವಲ್ಲಿ ವಿಕ್ರಮ ಪ್ರಯತ್ನಿಸಿದ್ದಾರೆ. ಈ ನಾಟಕವು ಸಾಹಿತ್ಯ ಮತ್ತು ಸಾಂಸ್ಕೃತಿಕ ಸನ್ನಿವೇಶಗಳನ್ನು ಅಚ್ಚರಿಯಾಗುವ ಹಾಗೆ ಅಪರೂಪದ ಕ್ರಮಗಳಿಂದ ಒಳಗಿಳಿಸಿಕೊಂಡಿದೆ. ಈ ಮೂಲಕ ಈವರೆಗಿನ ನಾಟಕ ರಚನೆಯ ವ್ಯಾಕರಣದಿಂದ ಭಿನ್ನವಾದ ಹಾದಿಯನ್ನು ತುಳಿದಿದೆ. ಕಥನ ಮತ್ತು ಭಾವಗೀತಾತ್ಮಕ ಸಂಭಾಷಣೆಗಳ ಮೂಲಕ ಇಲ್ಲಿನ ವಸ್ತು ತೆರೆದುಕೊಳ್ಳುತ್ತಾ ಹೋಗಿ ಮತ-ಮತಗಳ ವೈಷಮ್ಯ, ಅಧಿಕಾರ ಅಂತಸ್ತುಗಳ ಆಟಾಟೋಪ ಇತ್ಯಾದಿಗಳ ಬಿರುಮಳೆ ಮತ್ತು ಸಿಡಿಲುಗಳ ಹೊಡೆತದಲ್ಲಿ ವಿನಾಶಗೊಂಡ ನಿಷ್ಕಲ್ಮಶ ಪ್ರೇಮದ ದುರಂತ ವಸ್ತುಸ್ಥಿತಿಯನ್ನು ನವೀರಾಗಿ ರೇಖಿಸಿದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
‘ರಸ ಗಂಗಾಧರ’ ನಾಟಕದ ಕುರಿತು ಲೇಖಕರಾದ ವಿಕ್ರಮ ವಿಸಜಿ ಅವರ ಮಾತುಗಳು
©2024 Book Brahma Private Limited.