ಸಾಹಿತಿ ಕೃಷ್ಣಶಾಸ್ತ್ರಿಗಳು ರಚಿಸಿರುವ ’ಪಶುಪತಾಸ್ತ್ರ ” ಒಂದು ಕಿರುನಾಟಕವಾಗಿದೆ.
ಈ ನಾಟಕದಲ್ಲಿ ಶಂಕರ ಕೇವಲ ರೂಪ, ಆಕಾರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ತತ್ವವಾಗಿಯೂ ಕಂಡಿದ್ದಿದೆ. ಏಕತ್ವ ನಾನತ್ವಗಳ ಒಗಟಿನ ಗುಟ್ಟುಗಳಿವೆ. ಅದೂ ನಾನೇ ಇದೂ ನಾನೇ, ಅಳುವುದೂ ನಾನೇ, ನಗುವುದೂ ನಾನೇ ಎಂದೆಲ್ಲಾ ವಿಶ್ವವ್ಯಾಪಾರದ ಹಿಂದಿನ ದರ್ಶನದ ಮಾತುಗಳು ಕೇಳುತ್ತವೆ. ಇದೆಲ್ಲಾ ಮಕ್ಕಳ ಬಾಯಲ್ಲಿ ಏಕೆ ಅಂತ ಕೇಳುವ ಪ್ರಮೇಯ ಇಂದಿನದು. ಶಬರ ಶಂಕರ ಹಾಗೂ ಅರ್ಜುನರ ನಡುವಿನ ಮಾತುಗಳಂತೂ ನಾಟಕದ ಪ್ರೇಕ್ಷಕರನ್ನುಒಳ್ಳೇ ಗುಂಗಿನಲ್ಲಿ ತೇಲಿಸುವ ಮೋಡಿಯಂಥವು. ಜನಕ್ಕೆ ಇದೆಲ್ಲ ಕೇಳಿ ಕೇಳಿ ಗೊತ್ತಿದ್ದರೂ ಮತ್ತೆ ಮತ್ತೆ ಕೇಳುವ ಹಂಬಲ. ಕಿವುಗೊಟ್ಟು ಆಲಿಸುವ ಹಂಬಲ. ಹಾಗೇ ಈ ನಾಟಕ ಮಕ್ಕಳ ಬಣ್ಣಗಾರಿಕೆಯಲ್ಲಿ ನಡೆದರೂ ನಮ್ಮವರಿಗೆಲ್ಲಾ ಬೇಕಾದುದು. ಅದು ಉಣಬಡಿಸುತ್ತಿದ್ದ ಪಕ್ವಾನ್ನದ ರುಚಿಯನ್ನು ಇಂದಿನ ಕಾಲ ಕೇವಲ ನೆನಪಾಗಿ ಇರಿಸಿಕೊಳ್ಳಬಲ್ಲದಲ್ಲದೆ ಬೇರೆ ಸಾಧ್ಯವಿಲ್ಲ. ಅದೊಂದು ನನ್ನ ಜೀವನದ ಸುವರ್ಣ ಸನ್ನಿವೇಶ ಎಂಬ ಮಾತು ಕೃಷ್ಣಶಾಸ್ತ್ರಿಗಳ ಹಿಂದಿನ ನೆನಪುಗಳನ್ನೆಲ್ಲಾ ಹೇಳುತ್ತದೆ. ಹೀಗೆ ಈ ಶಬರ ಶಂಕರ ಪಾಶುಪತಾಸ್ತ್ರ ನೀಡಿದ ಪ್ರಸಂಗ ಕಳೆದ ದಿನಮಾನಗಳ ಹಬ್ಬದ ಸವಿನೆನಪು. ಅಂದಿನ ಬಾಲ್ಯದ ಸೊಗಸು. ಬಾಲ್ಯವನ್ನು ಹಿರಿಯರು ಕಂಡ ಬಗೆ, ಕೃಷ್ಣಶಾಸ್ತ್ರಿಗಳು ಮೇಷ್ಟ್ರಾಗಿ ಹೇಗೆಲ್ಲಾ ಹಳ್ಳಿವಾಡದ ಬದುಕಿನಲ್ಲಿ ಒಂದಾಗಿ ಹೋಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಈ ಕೃತಿ ಮುಖ್ಯವೆನಿಸುತ್ತದೆ.
©2024 Book Brahma Private Limited.